Sunday, December 22, 2013

"ಸೋಲು-ಗೆಲುವು.."

ಸೋಲುತಿದೆ ಮನಸುಗಳ ಪ್ರೀತಿ ಭಾವದ ಕನಸು
ಕರಗುತಿದೆ ನಿನ್ನೊಲವು ಕಾಡಿ ಕಾಡಿ..
ಮನಸು ಪ್ರೇಮದ ಗಂಗೆ ಹರಿವ ಭಾವದ ಕೂಸು
ಅಳುತಲಿದೆ ನೀ ನಡೆದ ದಾರಿ ನೋಡಿ..

ಗೆಲುವಿನೆಡೆಯಲಿ ಎಡವಿ,ನೀ ಕಳೆದ ನೆನಪುಗಳೆ
ಕೆಣಕುತಿವೆ ಅಣಕಿಸುತ ನನ್ನ ಸೊಲು..
ಸೋಲು ಗೆಲುವಿನ ನಡುವೆ ಅಂತರದ ಕಂದಕವ
ಅಳೆಯಬಹುದೇ ನಿನ್ನ ಅಳತೆಗೋಲು??

ಜಯಿಸುವುದು ಜೀವನವ ನಿನ್ನ ಪ್ರೀತಿ ಹಾರೈಕೆ
ಸೋಲಿಸಿದೆ ಸ್ಥೈರ್ಯವನೆ ಏಕಾಂತ ಭಾವ..
ಮರೆಸಿಬಿಡು ಬೇಸರವ ಜೀವ ಮರೆಯುವ ಮೊದಲೇ
ಗೆಲ್ಲಿಸಲಿ ಮತ್ತೊಮ್ಮೆ ಪ್ರೀತಿ ಪ್ರಭಾವ..
                  -ಶಿವಪ್ರಸಾದ ಭಟ್ಟ

Friday, November 22, 2013

"ಆಶಯ..!!"

ನೀನೇ ಕಾಣುವ ಕನ್ನಡಿಯಲ್ಲೂ
ಮಸುಕಿನ ಬಿಂಬದ ಶೃಂಗಾರ..
ಹರಿಯುವ ನೀರಿನ ನೆರಳಿನ ದಾರಿಗೂ
ಮೂಡಿದೆ ನಿನ್ನದೇ ಆಕಾರ..

ಜೀವ ಸೋಕುತಿಹ ಪ್ರೀತಿಯ ಗಾಳಿಗೆ
ಆಸರೆ ಬೇಕಿದೆ ಪ್ರೀತಿಯದೇ..
ಹೃದಯ ಸೋಲುತಿಹ ಒಲವಿನ ದಾಳಿಗೆ
ಹೆದರಿಕೆ ಇಂದಿಗೂ ಕನಸಿನದೇ..

ಕನವರಿಕೆಯ ಕರೆಯೋಲೆಯು ಕೂಗಿದೆ
ನಿನ್ನದೇ ಪ್ರೀತಿಯ ಪ್ರತಿ ಇರುಳು..
ಇನ್ನೂ ತಾಗಲಿ ನನ್ನಯ ಕಣ್ಣನು
ಗಾಳಿಗೆ ತೇಲುವ ಮುಂಗುರುಳು..

ಬಯಸಿದೆ ತನು-ಮನ ಈಗಲೂ ನಿನ್ನಯ
ಭುಜವನು ಒಮ್ಮೆಲೆ ಒರಗಿರಲು..
ತೆರೆದಿದೆ ಈ ಮನದರಮನೆ ಬಾಗಿಲು..
ಬಲಗಾಲಿಡು..ನೀ ಒಳಬರಲು..

                                  
                                                   -ಶಿವಪ್ರಸಾದ ಭಟ್ಟ

Monday, November 4, 2013

"ಕಡಲಿನ ಕೂಗು.."

ಕಡಲೂ ಕರೆಯಿತೆ ನೆನಪಿನಾಳಕೆ
ಸಂಜೆ ಸೂರ್ಯನ ಬಾನಿಗೆ..
ತೆರೆಗಳಿಳಿಯಿತೆ ಹೃದಯ ಬಾನಿಗೆ
ಮೌನ ಮಾತಿನ ದೀವಿಗೆ..

ಕಡಲಿನಲೆಗಳು ಕೆಣಕುತಿಹವು
ನೀನಿರದ ಈ ತೋಳನು..
ಬಂದು ಕೈ ಹಿಡಿ ಮರೆವ ಮೊದಲೇ
ಪ್ರೀತಿ ಕಡಲಿನ ಒಡಲನು..

ನೀರು ತೋಯುವ ಮರಳ ಕಣದಲೂ
ನಿನ್ನ ಹೆಸರೇ ಬರೆದೆನು..
ಮನದಿ ಹರಿದಿಹ ಪ್ರೀತಿಯನ್ನು
ಜಾರದಂತೆ ಕರೆದೆನು..

ಇಂದು ಮುಳುಗಿದ ಸೂರ್ಯ ಕಿರಣವು
ನಾಳೆ ಮತ್ತೆ ಹೊಮ್ಮಲಿ..
ಮನದ ಮಳಲಲೂ ನಿನ್ನ ಹೆಸರೇ
ಜೀವವಾಗಲಿ..ಚಿಮ್ಮಲಿ..
       
            - ಶಿವಪ್ರಸಾದ ಭಟ್ಟ

Friday, November 1, 2013

"ದೀಪಾವಳಿ..!!!!"



ದೀಪಗಳ ಬೆಳಕಲ್ಲಿ ಕನಸು ಕಟ್ಟುವ ಗೆಳತಿ..
    ಮುಗಿಯದಿರಲೆಂದೆಂದೂ ಬೆಳಕಿನ ದಾಳಿ..
ನನ್ನೆದೆಯೊಳಗೆ ನಿನ್ನ ಪ್ರೀತಿ ಬೆಳಗಿಸಲೆಂದೇ
    ಮತ್ತೆ ಬಂದಿದೆ ನೋಡು "ದೀಪಾವಳಿ.."

                     - ಶಿವಪ್ರಸಾದ ಭಟ್ಟ

Thursday, October 24, 2013

ಕನಸುಗಾರ


ಕೋಲ್ಮಿಂಚಿನ ಸಂಚಿಗೂ
ಬೆರಗಾಗದೇ ಚೆಲುವು
ಹೊಳೆ ಹೊಳೆವ ಕಣ್ಣಿರುವ ನಿನ್ನ
ಪ್ರೀತಿಯ ಕಡೆಗೆ
ಸೆಳೆದು ಭಾವನೆಗಳಿಗೆ
ಬಣ್ಣ ಕೊಡಲು ಕಾತರಿಸುವ
ನಾನು,ನಿನ್ನದೇ ಹೃದಯದ
"ಕನಸುಗಾರ"
                -ಶಿವಪ್ರಸಾದ ಭಟ್ಟ

Thursday, October 10, 2013

ಮತ್ತದೇ ಏಕಾಂತ..!!!!


ಅವಳಿಲ್ಲದ ಸಂಜೆಯಲ್ಲಿ ಅವಳದೇ ನೆನೆಪುಗಳೊಡನೆ ಪಡುವಣ ದಿಗಂತದೆಡೆ ಮುಖ ಮಾಡಿ ಕುಳಿತಿದ್ದೆ.ಅವಳಿಲ್ಲದಾಗಲೂ ಅವಳ ಮುಖ ಸ್ಫುಟವಾಗಿ ಎದುರಿಗಿತ್ತು.ಪಡುವಣ ಬಾನಿನ ನೀಲಿಯ ಚಂದ್ರ ನನ್ನನ್ನೆ ಅಣಕಿಸುತ್ತಿದ್ದ.ಎದೆಯೊಳಗಿನ ನೀರವ ಮೌನ ಹೊರಬರಲು ತವಕಿಸುತ್ತಿತ್ತು..ಹಪಹಪಿಸುತ್ತಿತ್ತು..ಒಂದು ಘಳಿಗೆಯೂ ದೂರ ಹೋಗದ ಅವಳು ನನ್ನಿಂದ ಬಹುದೂರ ಓಡಿದಂತೆ ಭಾಸವಾಯಿತು.ಹರಿಯುವ ನದಿಯ ಸಾಗರ ಸೇರುವ ತವಕ ಅವಳಲ್ಲಿಂದು ಕಾಣಲಿಲ್ಲ.ಕಡಲಿಂದ ಬೇರೆಯಾದ ಮೋಡದ ಸ್ನಿಗ್ಧತೆ ಅವಳ ಮೋಹಕತೆಗೆ ಹೋಲುತ್ತಿತ್ತು.ಇಂದು ಅದೇಕೋ ಅಂದಗಾತಿಯಾಗಿ ಕಂಡವಳು ಹಾಗೆಯೇ ಹೊರಟು ಹೋದಳು.ಪ್ರೀತಿ  ಸುಳಿ ಮಿಂಚಿನಲ್ಲಿ ಒಮ್ಮೆ ಮಿಂಚಿ ಮರೆಯಾದಳು.ಮಿಂಚಿನ ಬೆಳಕಲ್ಲಿ ಕಂಡ ಮುಖ ಮನದಲ್ಲಿ ಅಚ್ಚೊತ್ತುವ ಮೊದಲೇ ಕತ್ತಲಿನಲ್ಲಿ ಮಾಯವಾದಳು.ಹುಚ್ಚು ಮನಸ್ಸಿನ ಹತ್ತಾರು ಪರಿವೆಯಲ್ಲಿ ಏನೆಂದು ಚಿಂತಿಸಲಿ??ಕತ್ತಲಿನಿಂದ ಬೆಳಕಿನೆಡೆ ಕೊಂಡೊಯ್ಯುವ ಜ್ಯೋತಿ ಆರಿಹೋಯಿತೆನ್ನಿಸಿದಾಗ ತೈಲ ಎರೆದರೂ ಪ್ರಯೋಜನವೇನು??ಮತ್ತೆ ಅವಳು ಕಾಣಲು ಆ ಮಿಂಚಿಗೆ ಕಾಯಬೇಕೆ??ಸುಳಿಗಾಳಿಯಾದರೂ ಎದಿದ್ದರೆ ತಿರುಗುವಧೂಳಿನ ಕಣದಲ್ಲಿ ಅವಳನ್ನೇ ಕಾಣಬಹುದಿತ್ತೇನೋ..ಅವಳ ಹಂಬಲ ಮೋಡಗಳಾಗಿ ಗುಡುಗಿದ್ದರೆ ಗುಡುಗಿನಲ್ಲಿಯೂ ನನ್ನವಳ ಕರೆ ಕೇಳಬಹುದಿತ್ತೇನೋ..ಆದರೆ ವಿಧಿಯ ಕಪಟ..ಇಂದು ಮಳೆ ಬರುವ ಹಾಗಿದ್ದರೂ ಬರಲೇ ಇಲ್ಲ..
    ಅವಳಿಲ್ಲದ ವಾತಾವರಣವನ್ನು ನಾನು ಎದಿರಿಸಿದ್ದು ಇದೇ ಮೊದಲು.ನನ್ನೊಳಗೆ ನಾನಾಗಿ ನಗುತ್ತಿದ್ದವಳು ಹೊರಟು ಹೋಗಲಾರಳು ಎಂಬ ಹುಚ್ಚು ಧೈರ್ಯ ಕುಗ್ಗಿತ್ತು.ಮುಳುಗಿದ ಸೂರ್ಯನನ್ನು ಕಂಡೊಡನೆ ಇವಳೂ ಹೀಗೆ ನನ್ನ ಬಾಳಿನಲ್ಲಿ ಮುಳುಗದಿರಲಿ ಎಂಬ ಆರ್ದ್ರತೆ,ದೀನತೆ ಕೊರಗಿದ ಮನಸ್ಸಿನಲ್ಲಿ ಕನಸುಗಳನ್ನು ಕರಗಿಸುತ್ತಿತ್ತು.ನಾನು ನಿಜವಾದ ಪ್ರೇಮಿಯೆಂದು ಎದೆ ತಟ್ಟಿ ಹೇಳಲಾರೆ.ಆದರೆ ಅವಳಿಲ್ಲದ ಬಾಳಿನ ಕಲ್ಪನೆಯೇ ನನ್ನನ್ನು ನಶ್ವರದೆಡೆ ಸೆಳೆದಿರಬೇಕಾದರೆ ಅವಳಿಲ್ಲದೇ ನಾನು ಇರಬಲ್ಲೆನೇ??ಅವಳಿಲ್ಲದ ಏಕಾಂತ ಸುಖ ಕೊಡಲಿಲ್ಲ..ಕೊನೆಗೂ ಕೊಡಲಿಲ್ಲ..
    ಅವಳೇಕೆ ಹೀಗೆ ಸನಿಹ ಎಂಬ ಪ್ರಶ್ನೆಗೆ ಉತ್ತರಿಸುವ ಜಾಣ್ಮೆ ನನ್ನಲ್ಲಿಲ್ಲ.ಆದರೆ ಅವಳನ್ನು ಸನಿಹದಲ್ಲೇ ಕಾಣುವ ಬಯಕೆಗೆ ಪ್ರಶ್ನೆಯಿಲ್ಲ..ಈ ವಯಸ್ಸಿನ ಪ್ರೀತಿ ಕೇವಲ ಅಸಂಬದ್ಧ ಎಂಬ ಮಾನಸಿಕ ನಿಲುವುಗಳಿಗೆ ನಾನು ಬದ್ಧನಾದವ ನಾನಲ್ಲ.ಅವಳು ಬರುವಾಗ ಗೌರವಿಸಿದ್ದೇನೆ..ಇರುವಾಗಲೂ ಗೌರವಿಸಿದ್ದೇನೆ..ತಮ್ಮ ವಯಕ್ತಿಕ ಹಿತಾಸಕ್ತಿಗೋಸ್ಕರ ಪ್ರೀತಿಸುವವರ ಬವಣೆಯ ಗೋಜಿನಲ್ಲಿ ಪ್ರೀತಿಯ ಸ್ವಚ್ಛಂದತೆ ಸಾಧ್ಯವಾದೀತೆ??ಜನಾಂಗ ಬದಲಾಗಿದೆ..ಜನರೇಶನ್ ಹೊಸತನ ಬಯಸುತ್ತಿದೆ.ಆದರೆ ನನಗೆ ನನ್ನ ಹಳೆಯತನ ನೆನಪಾಗುತ್ತಿದೆಯಲ್ಲ..ಎದೆಯಲ್ಲಿನ ಹವಾಮಾನ ವೈಪರಿತ್ಯವೇ ಕಾರಣವಾಗಿರಬಹುದು..ಸುರಿದ ಮೋಡ ಕರಗುವಂತೆ ಬಾಳಿನಲ್ಲಿ ಇಲ್ಲವಾದರೆ ಅರ್ಥವಿಲ್ಲವಾದೀತು.ಏನೇ ಆದರೂ ಪ್ರೀತಿ ಕರಗುವುದಿಲ್ಲ.
    ಅವಳು ಬಂದ ಈ ದಿನಗಳಲ್ಲಿ ನಾನೆಂದೂ ಅವಳ ಪ್ರೇಮಿಯಾಗಲಿಲ್ಲ..ಹಿಂದೆ ತಿರುಗಲಿಲ್ಲ.ಆದರೂ ಮನದ ಮೂಲೆಯ ವಿರಹಕ್ಕೆ ಅವಳೇಕೆ ಕಾರಣಳು ಎಂಬ ಪ್ರಶ್ನೆ ಹಲವಾರು ಬಾರಿ ಮನದಲ್ಲಿ ಮೂಡಿ ಮರೆಯಾಗಿದೆ.ನನ್ನೊಳಗೆ ಹೊಸ ಚೈತನ್ಯದ ಜೀವಕನಸು ಮೂಡಿಸುವ ಅವಳ ಸ್ಪೂರ್ತಿ ಕಾಣದ ಕೈ ಅಲ್ಲ.ನನ್ನೊಳಗೆ ನಾನಾಗಿ ನನ್ನೆಲ್ಲ ಕುರುಹುಗಳಿಗೂ ಬೆಂಬಲಿಸಿದ್ದಾಳೆ..ಪ್ರೀತಿಸಿದ್ದಾಳೆ..ಆ ಪ್ರೀತಿಗೆ ನಾನು ಕೃತಜ್ನ..ಆದರೆ ಈ ಏಕಾಂತವೇ ಹೀಗೆ ಬೇಸರ ತರಿಸಿತಲ್ಲ..ಅವಳಿಗಿದು ಕಾಣದೇ ಹೋಯಿತಲ್ಲ..ಎದೆಯೊಳಗಿನ ಮೌನದ ಅವಳ ಧ್ಯಾನದ ಕೂಗು ಅವಳಿಗೆ ಕೇಳದೇ ಇದ್ದುದ್ದರಲ್ಲಿ ತಪ್ಪಿಲ್ಲ..ಅವಳಿಗೂ ನನ್ನ ಹೊರತಾದ ಪ್ರಪಂಚವಿದೆ ಎಂಬ ಸತ್ಯದ ಕಠೋರತೆಯನ್ನು ನಿಧಾನವಾಗಿ ಅರಗಿಸಿಕೊಳ್ಳುತ್ತಿದ್ದೇನೆ.ಆದರೂ ಅವಳು ಹೋದ ದಾರಿಯಲ್ಲಿ ಹೆಜ್ಜೆಗುರುತುಗಳನ್ನು ನೋಡುತ್ತಿರುತ್ತೇನೆ..ಅವಳ ಕಾಲ್ಗೆಜ್ಜೆಯ ದನಿಗೆ ಕಾಯಿತ್ತಿರುತ್ತೇನೆ..
   ನಮ್ಮ ಋಣಾನುಬಂಧದ 'ಸಿಂಹಾವಲೋಕನ'ದ ಅವಶ್ಯಕತೆಯಿಲ್ಲ.ಅವಳು ನನ್ನೊಡನೆ ಕಳೆದ ಪ್ರತಿ ಸಮಯವೂ ಹಸಿರಾಗಿರುತ್ತದೆ.ನನ್ನ ಜೀವನದ ಚೈತ್ರ ಮುಗಿಯುವುದೇ ಇಲ್ಲ ಅವಳ ನೆನೆಪಿರುವವರೆಗೂ..ನನ್ನ ಪ್ರೀತಿಯನ್ನು ಯಾರೂ ಅಳೆಯಬೇಕಿಲ್ಲ..ನಾನವಳ ನಿಜವಾದ ಸಂಗಾತಿ..ಬಾಳ ಸಂಗಾತಿ..ಭಾವ ಸಂಗಾತಿ..ಆ ತೃಪ್ತಿ ಸಾಕು ನನಗೆ.ಅವಳ ಪ್ರೀತಿಯ ಪಿಸುದನಿ ಇನ್ನೂ ಕಿವಿಯಲ್ಲಿ ಗುನುಗುನಿಸುತ್ತಿದೆ.ಆ ಒಂದು ಸ್ವರ ನನ್ನೆಲ್ಲಾ ಚಹರೆಗಳಿಗೆ ಮುನ್ನುಡಿಯಾಗಬಲ್ಲದು.
    ನಿಜವಾಗಿಯೂ ಈ ಪ್ರೀತಿಯೇ ಹಾಗೆ..ನಿಜವಾಗಿ ಪ್ರೀತಿಸುವವರನ್ನು ತನ್ನಲ್ಲೇ ಅಡಗಿಸಿಕೊಂಡುಬಿಡುತ್ತದೆ..ಮನೆಯೊಳಗೆ ಮಡದಿಯಿಲ್ಲದಾಗ ಮಲ್ಲಿಗೆಯ ಕಂಪಿಗೆ ಅರ್ಥವಿಲ್ಲ.ಆದರೆ ಕಾಲ್ಗೆಜ್ಜೆಯ ಸಪ್ಪಳವಿಲ್ಲದೇ,ಕೈ ಬಳೆಗಳ ನಾದವಿಲ್ಲದೇ ಹೃದಯದ ಅರಮನೆ ಬಿಕೋ ಎನ್ನುತ್ತಿರಲೂ ಅವಳು ಬರಲೇ ಇಲ್ಲವಲ್ಲ..ಅವಳು ನನ್ನಿಂದ ದೂರ ಹೋದರೂ ಈ ಮನದ ಹೊಸಿಲು ದಾಟಲು ಸಾಧ್ಯವಿಲ್ಲ..ಎಂದೆಂದೂ ಅವಳ ಭುಜಕ್ಕೆ ಒರಗಿ ಕೂರುವಾಸೆ..ಅವಳ ಬರುವಿಕೆಗಾಗಿ ಕಾಯುತ್ತಿದ್ದೇನೆ..ಬರುತ್ತಾಳೆ..ಅವಳು ಹೋದ ದಾರಿಯಲ್ಲಿ ಹುಚ್ಚನಂತೆ ಅಲೆದಿದ್ದೇನೆ.ಅವಳ ಹೆಜ್ಜೆಗುರುತಿನಲ್ಲೇ ಕಾದಿದ್ದೇನೆ..ಮರಳಿ ನನ್ನರಸದೇ ಇರುವಳೇ??
    ಅವಳಿಲ್ಲದ ಬದುಕಿನ ಸಂದಿಗ್ಧತೆಯಲ್ಲಿ ಸ್ಪೂರ್ತಿ ತುಂಬುವ ಜೀವವಿಲ್ಲದೇ ನಲುಗುತ್ತಿದ್ದೇನೆ..ನಡುಗುವ ಎದೆಯ ಮೇಲೆ ಕೈ ಇಟ್ಟು ಬಡಿತ ಹೆಚ್ಚಿಸು ಗೆಳತಿ..ಒಮ್ಮೆ ಕಣ್ಣೀರು ಒರೆಸಿ ಹಣೆಯ ಚುಂಬಿಸು ಗೆಳತಿ..ನೀ ಇಲ್ಲದ ದುಃಖ ಇಂದೇ ಕೊನೆಯಾಗಲಿ..ಬಂಡುಬಿಡೆ ಒಮ್ಮೆ..ನಿನ್ನ ಪ್ರತಿ ಹೆಜ್ಜೆಗೂ ನೆರಳಾಗಿರುತ್ತೇನೆ.ಕಾವಲಿಗೆ ಪುಟ್ಟ ಹೃದಯವಿದೆ.ಕಾಲ್ತೊಳೆದು ಒಳಗೆ ಕರೆವೆ..ಬಲಗಾಲಿಟ್ಟು ಬಾ ಮತ್ತೆ..ನೀನಿರದೇ ಬದುಕದ ಜೀವದ ಅಂತರಂಗದ ಶಾಶ್ವತ ಬಡಿತ ನೀನಾಗು.ನೀನೇ
ಆಗು..ನಿನ್ನೊಲವಿನ ಸ್ವಾಗತಕ್ಕೆ ಕೆಲವೇ ಸಾಲುಗಳು ಸಾಕೆ.."ನೀ ನಡೆವ ಹಾದಿಯಲ್ಲಿ ನಾ ಕಾಣಲಿಲ್ಲ..ಕಾಣುವ ತವಕ ನನ್ನೆಡೆಗೆ..ನಾ ಕಂಡೆ ನಿನ್ನ ಕಣ್ಣಲ್ಲಿ..ನೀ ನಡೆದ ಹಾದಿಯ ಮಣ್ಣಲ್ಲಿ.. ನೋವಾಗದಿರುವುದೇ ನೀ ಇಲ್ಲವಾದರೆ??ನೀ ಬದುಕಬಹುದೇನೆ ನಾ ಇಲ್ಲವಾದರೆ??ಬಂದುಬಿಡು ಗೆಳತಿ..ಬಂದು ಒಮ್ಮೆ ಕೂಗು 'ಒಳಗೆ ಬರಲೇ'???"..
                                                                                                                 - ಶಿವಪ್ರಸಾದ ಭಟ್ಟ

Thursday, October 3, 2013

ಮುಂಗಾರು ಮಳೆ,ಅವಳು ಮತ್ತು ಪ್ರೀತಿ....!!!!

   

    ಮೊನ್ನೆ ಸಿರಸಿಯಲ್ಲಿ ಸಿಕ್ಕ ಹಳೆಯ ಸ್ನೇಹಿತ ಮಳೆಯಲ್ಲಿ ನೆನೆಯದೇ ಬಹಳ ಕಾಲವಾಯಿತು ಎಂದ ಅರ್ಧ ಗಂಟೆಯಲ್ಲಿಯೆ ಮಳೆ ಶುರು ಆದಗ ಸುಖಾ ಸುಮ್ಮನೆ ಮಳೆ ತರಿಸಿದೆ ಎಂದು ಅವನಿಗೆ ಬಯ್ದಿದ್ದೆ.ಆದ್ರೆ ಬಯಸದ ಮಳೆಯೊಳಗೆ ನೆನೆದು ವಾಪಾಸಾದಾಗ ಮನದ ಹಗುರತೆ ಸ್ವಲ್ಪ ಉಲ್ಲಾಸ ನೀಡಿದ್ದಂತೂ ನಿಜ.ಏನೇ ಇದ್ದರೂ ಈ ಪ್ರೀತಿ,ಈಸಂಜೆ,ಈ ಏಕಾಂತ ಇದಕ್ಕೆಲ್ಲ ಒಳಗಿಂದೊಳಗೇ ಏನೋ ಸಂಬಂಧ ಇರಬಹುದು ಅನ್ನಿಸಿದ್ದಂತೂ ಸುಳ್ಳಲ್ಲ.ಏನಾದರೂ ಮಳೆಯಲ್ಲಿ ನೆನೆದ ಉತ್ಸಾಹದ ನಡುವೆ ಯಾವುದೋ ಏಕಾಂಗಿ ಭಾವ ಕಾಡುತ್ತಿತ್ತು.
    ನಿಜವಾಗಿಯೂ ಈ ವಯಸ್ಸೇ ಹೀಗಾ??ಯಾವುದೋ ಹುಮ್ಮಸ್ಸು,ಯಾವುದೋ ಸ್ಪೂರ್ತಿ ಇಲ್ಲದೇ ಏನೂ ಮಾಡುವುದು ಸಾಧ್ಯವೇ ಇಲ್ಲವಾ ಎಂದೆನ್ನಿಸಿಬಿಡುತ್ತದೆ ಕೆಲವೊಮ್ಮೆ. "ಮತ್ತದೇ ಬೇಸರ..ಅದೆ ಸಂಜೆ..ಅದೇ ಏಕಾಂತ.." ಹಾಡು ಕೇಳಿದಾಗಲೆಲ್ಲ ಈ ವಿರಹ ಎಂಬುದು ಪ್ರೇಮಿಗಳಿಗೋಸ್ಕರವೇ ಹೇಳಿ ಮಾಡಿಸಿದ ‍ಸಜೆಯೇನೋ ಎನ್ನಿಸುತ್ತದೆ..ವಯಸ್ಸಿನ ತಪ್ಪೋ ಮನಸ್ಸಿನ ತಪ್ಪೋ ತಿಳಿಯದು.ಅನುಭವಿಸುವ ಮನಸ್ಸುಗಳ ತಳಮಳಗಳ ಬಡಿತಗಳ ಸಪ್ಪಳ ವಿಧಿಗೆ ಕೇಳಿಸುವುದೇ ಇಲ್ಲ.ಮುಂಗಾರು ಪ್ರಾರಂಭ ಆದೊಡನೆ ಪ್ರೀತಿಯ ಹುಮ್ಮಸ್ಸಿನಲ್ಲಿ ನೆನೆಯುವ ಭಾವಗಳ ಕೂಗು ಕೇವಲ ಮಳೆಯ ಸದ್ದಿನೊಳಗೇ ಅಡಗಿಹೋಗುತ್ತದೆ.ಭಾವ ಹುಟ್ಟುವುದೂ ಮಳೆಯೊಳಗೇ..ಕೆಲವೊಮ್ಮೆ ಸಾಯುವುದೂ ಮಳೆಯೊಳಗೇ.ಪ್ರೀತಿಸಿದ ಮನದ ಪ್ರೀತಿಯ ಸ್ವರ ಎಲ್ಲಿಯೂ ಶಾಂತತೆ ಮೀರುವುದಿಲ್ಲ.
    ಯಾವುದೊ ಭಾವಗಳ ತೊಳಲಾಟದಲ್ಲಿ ಸಿಲುಕಿ ಪ್ರೀತಿ ಎಂಬ ಸಾಂತ್ವನದ ಗೂಡಿನೊಳಗೆ ಕುಳಿತು ನಿಭಾಯಿಸಲಾಗದ ಸಂಕಟಗಳೊಡನೆ ಹೆಣಗಾಡಿ ಸಿನಿಮೀಯ ಶೈಲಿಯಲ್ಲಿ 'ದೇವದಾಸ್' ಎಂದು ಮದ್ಯದ ಮೊರೆ ಹೋಗುವ ಇಂದಿನ ಪೀಳಿಗೆಯ ಪ್ರೀತಿಯ ವರ್ಣನೆ ಕೆಲವೇ ಮಾತುಗಳಿಗೇ ಸೀಮಿತ.ಕೆಲವೊಮ್ಮೆ ಕಾರಣವಿಲ್ಲದ ಹುಸಿಮುನಿಸಿಗೇ ಪ್ರೀತಿಯ ಕೊನೆಯಾಗುತ್ತದೆ.ಅವಳದೇ ನೆನಪು,ಅವಳಿಗೊಸ್ಕರ ಬರೆದ ಕವಿತೆಯ ಸಾಲುಗಳು,ಅವಳಿಲ್ಲದೇ ಇಲ್ಲದ ಜೀವನದ ಕಲ್ಪನೆ,ಇವೆಲ್ಲ ಹರೆಯದ ಹುಡುಗರ ಮನಸ್ಸಿನ ಭೀತಿಯ ಚಿಲುಮೆಗಳು.ಏರಿಳಿಯುವ ಹೃದಯದ ಪ್ರತಿ ಬಡಿತದಲ್ಲೂ ಅವಳ ನೆನಪೇ ಕೊರೆದಿರುವಾಗ ಮನಸ್ಸಿನ ಕಾರಂಜಿಯ ಬುಗ್ಗೆ ಅಳತೆ ಮೀರಿರುವುದಂತೂ ನಿಜ.

    ಈ ಪ್ರೀತಿ ನಿಜವೋ ಸುಳ್ಳೋ ಎಂದು ಸಮರ್ಥಿಸುವ ಕೆಲಸ ಮೂಢತೆಯ ಪರಮಾವಧಿಯೇ ಸರಿ.ಏಕೆಂದರೆ ಪ್ರೀತಿಸುವವನಿಗೆ ಪ್ರೀತಿ ಪ್ರೀತಿಯೇ..ಪ್ರೀತಿ ವಂಚಿತನ ಬಾಳಿನಲ್ಲಿ ಕೊರಗುವ ಭೀತಿಯೇ.ಒಂದರ್ಥದಲ್ಲಿ ಬಣ್ಣ ಬದಲಾಯಿಸುವ ಊಸರವಳ್ಳಿ..ಅರಿತವರ ಪ್ರೀತಿಯ ಪರಿಯ ಪ್ರಹಾರದ ಆಘಾತದ ಚೇತರಿಕೆ ಅಸಾಧ್ಯ.ಮಳೆಯ ನೆನೆವ ನೆನಪುಗಳೊಡನೆ ಪ್ರೀತಿಯ ಅಸ್ತಿತ್ವ ಶಾಶ್ವತವಾಗದಿಲ್ಲ.ಬಹುಶಃ ಮೊನ್ನೆ ನಾನನುಭವಿಸಿದ ಒಂಟಿತನ ಕೆಲವರಾದರೂ ಅನುಭವಿಸಿರಬಹುದು.ಆದರೆ ನನಗೇಕೆ ಆ ಭಾವ ಕಾಡಿತು ಎಂಬುದನ್ನು ಗುರುತಿಸಲು ಆಗದೇ ಇದ್ದೇನೆ.ಆದರೆ ಆ ಮಳೆಯ ಸೆಳೆತದ ಭೀತಿ ಇಂದಿಗೂ ನನ್ನನ್ನು ಕಾಡುತ್ತಿದೆ.ಪ್ರೀತಿಸುವ ಘಳಿಗೆಯಲ್ಲಿ ಕಾಯುವ ನೆನಪುಗಳು ಸುರಿವ ಮಳೆಯಲ್ಲಿ ನೆನೆದಾಗ ನೀರಾಗಿ ಇಳಿದಿರುತ್ತವೆಯೇನೋ....!!!!ಕೆಲವೊಮ್ಮೆ ಮಳೆಯಲ್ಲಿ ನೆನೆದಾಗ ಕಣ್ಣೀರೂ ಸಹ ಮಳೆಯೊಡನೆ ಬೆರೆತಿರುತ್ತದೆ.ಅವಳ ಬರುವಿಕೆಗಾಗಿ ಕಾಯುವ ಸಂದರ್ಭದಲ್ಲಿ ಬರುವ ಮಳೆ ಸತ್ತ ಮನೆಗೆ ಸಾಂತ್ವನಕ್ಕೆ ಬಂದಂತೆ ಎಂಬ ಅತಿಶಯೋಕ್ತಿಯಾಗಿಬಿಡುತ್ತದೆ.ತನುವು ನಿನ್ನದು ಮನವು ನಿನ್ನದು ಎಂಬ ಹುಮ್ಮಸ್ಸಿನೊಂದಿಗೆ ಪ್ರೀತಿಸಲು ಆರಂಭಿಸಿದ ಹೃದಯಗಳ ಕನಸಿನ ಗೋಡೆ ಉರುಳಿದಾಗ ತಳಪಾಯದ ಮೃದುತ್ವ ನೆನೆದಿರುವುದೇ ಕಾಣುತ್ತದೆ.ಸಣ್ಣ ಸಣ್ಣ ವಿಶಯಗಳ ಭಿನ್ನ ನಿಲುವುಗಳು ಇಂದಿನ ಪ್ರೀತಿಯ ಬುಡಕ್ಕೆ ಕೊಡಲಿಕಾವು.ಬರೆಯದ ಕವಿತೆಯ ಹೊಸ ಸಾಲುಗಳೇ ಹೃದಯದಲ್ಲಿ ಜಿನುಗುತ್ತಿರುವಾಗ ಕಾಣದ ಮನಸ್ಸಿನ ವೇದನೆಗೆ ಮನಸ್ಸು ಕೈಗನ್ನಡಿಯಾಗದೇ ಇದ್ದೀತೆ??
    ಜೀವನದಲ್ಲಿ ಪ್ರೀತಿಯ ಉತ್ಸಾಹಿಗಳಿಗೆ ಕಾಣುವುದು ಕೇವಲ ಪ್ರೀತಿಯೊಂದೇ.ಸಾಧನೆಯ ಶಿಖರದ ಉನ್ನತಿಯಲ್ಲಿನ ಪ್ರೀತಿಯ ಹಕ್ಕಿಯ ಜೊತೆಗೂಡಿ ಹಾರುವ ಹುಮ್ಮಸ್ಸಿನಲ್ಲಿ ವೈಮನಸ್ಸುಗಳ ಕೊಲೆಗೈಯುವ ಮನಸ್ಥಿತಿಯ ಅರಿವೇ ಇರುವುದಿಲ್ಲ.ಸಂಜೆ,ಏಕಾಂತ,ಮಳೆಗಳ ಭಾವನೆಗಳಲ್ಲಿ ತಲ್ಲೀನವಾಗುವ ಜೀವಗಳಿಗೆ ಜೀವನದ ಹೊಸ ಸೂರ್ಯೋದಯದ ಕನಸಿನ ದಾರಿಯ ಪರಿವೆಯೇ ಇರುವುದಿಲ್ಲ.ಹೀಗಾಗಿ ಸಾಧನೆಯ ಹಿಂದಿನ ಅವಳ ಸ್ಪೂರ್ತಿ ಎಲ್ಲಕ್ಕಿಂತ ಮಿಗಿಲಾಗಿರುತ್ತದೆ.ಪ್ರೀತಿಯ ಪರಿಧಿಯ ಪರಿವೆಯಿರುವ ಯಾವ ಪ್ರೇಮಿಯೂ ಪ್ರೀತಿಯಿಲ್ಲದ ಬದುಕನ್ನು ಊಹಿಸಲಾರ.ಹೀಗಾಗೇ ಮಳೆ,ಸಂಜೆ,ಏಕಾಂತಗಳ ಪ್ರೀತಿಯ ಅರ್ಥ ಬಹುವಾಗಿರಬಹುದು..ಹೃದಯದ ಪ್ರೀತಿಯ ಸೆರೆಮನೆಯೊಳಗೆ ಭಾವದ ಬಂಧಿಯಾಗುವ ಪ್ರತಿಯೊಬ್ಬನ ಅಂತರಂಗವೂ ಮುಂಗಾರು ಮಳೆಯ ನೆನೆಯುವಿಕೆ ಬಯಸುತ್ತದೆ.
    ಪ್ರೀತಿ ಎಂಬ ಪದದ ನಿಜವಾದ ಅರ್ಥ ಅರಿತ ಮಹಾಶಯ ನಿಜವಾದ ಪ್ರೀತಿಯನ್ನು ಗೌರವಿಸುತ್ತಾನೆ.ಭಾವನೆಗಳ ಬಲೆಯಿಂದ ಬದುಕಿ ಬರುವ ಆಸೆ ಕಮರಿಹೋಗುತ್ತದೆ.ಏನೇ ಆದರೂ ನಾನು ಇದರಲ್ಲಿ ಅನನುಭವಿ.ಪ್ರೀತಿ ಅರ್ಥೈಸಿಕೊಡವನಾಗಿ ಪ್ರೀತಿಗಾಗಿ ಕೆಲವು ಸಾಲು ಬರೆಯಬಹುದು.."ಮನಸೂ ನಿನ್ನದೆ..ಕನಸೂ ನಿನ್ನದೆ..ಕರಗದಿರಲಿ ಪ್ರೀತಿ...ಕಾಣದ ಕನಸಿನ ನನಸೂ ನಿನ್ನದೆ..ಮೂಡದಿರಲಿ ಭೀತಿ......!!!!"
                              -ಶಿವಪ್ರಸಾದ ಭಟ್ಟ



Thursday, September 19, 2013

ಇದೇ ಕೊನೆಯ ಕವಿತೆ....!!!!


ಇದೇ ಕೊನೆಯ ಕವಿತೆ ಪ್ರಿಯೆ....
ಇದೆ ಕೊನೆಯದು..
ಜೀವ ಭಾವಗಳಾಚೆ ಸೋಲುತಿಹುದು..
ಪ್ರೀತಿ ಕಾರ್ಮುಗಿಲೇಕೊ ಕರಗುತಿಹುದು..
ದ್ವೇµÀ  ಮಾರುತ ನಮ್ಮ ಸರಿಸುತಿಹುದು..
ಇದೇ ಕೊನೆಯ ಕವಿತೆ ಪ್ರಿಯೆ....
ಇದೆ ಕೊನೆಯದು..

ಹೇಗೆ ಬರೆಯಲೆ ಗೆಳತಿ ಮನದಾಳದ ಮಾತು
ಅಡ್ಡವಾಗಿಹುದಿಲ್ಲಿ ಯಾರದೋ ಮಾತು..
ಮನದ ಆಮಿಶ ತುಂಬಿ ಬಂದಿಹುದಿಲ್ಲಿ
ಚಿಲುಮೆ ಎದೆಯಲಿ ನೋವು, ನಲಿವನ್ನೇ ಮರೆತು..
ಉತ್ತರವೇಸಿಗದಿರುವ ಹಲವು ಪ್ರಶ್ನೆಗಳಿಹುದೆ..
ಉತ್ತರಿಸೆ ನೀ ಒಮ್ಮೆ ಮನದೊಳಗೇಕೂತು..

ಭಾವ ಸತ್ತಿಹುದಿಲ್ಲಿ ಪ್ರೀತಿ ಬತ್ತಿಹುದಿಲ್ಲಿ
ಜಲಧಿ ಶರ ಸೇತುವೆಯೆ ಕುಸಿಯುತಿಹುದು..
ಬರೆಯಲಾರೆ ಎಂದು ಬರೆಯದಿದ್ದರೂ ಕೂಡ
ಮನದೊಳಗೇ ಹೊಸ ಕವಿತೆ ಮೂಡುತಿಹುದು..
ನಿನ್ನ ಪ್ರೀತಿಯ ಶರಧಿ ದಾಟುವಾತುರದಲ್ಲಿ
ಮನದ ಹಾಯಿಯ ದೋಣಿ ಮುಳುಗುತಿಹುದು..

ಬರೆಯಬಲ್ಲೆನೆ ಮತ್ತೆ ಹೊಸ ಕವಿತೆ ನಿನಗಾಗೆ
ಬಯಸಿದರೆ ನಿನ್ನ ಮನ ನನ್ನ ಕಡೆಗೆ..
ಭಾವ ಹುಟ್ಟುವುದಿಲ್ಲಿ,ದ್ವೇµÀ  ಮೆಟ್ಟುವುದಿಲ್ಲಿ
ಪ್ರೀತಿ ಹರಿಯುವುದಿಲ್ಲಿ ನಿನ್ನ ಕಡೆಗೆ..
ಒಡನೆ ಬಾ ಸಂಗಾತಿ ಮನದ ಹತ್ತಿರಕೆ..
ಬಿಡಲಾರೆ ಎಂದೆಂದೂ ಭೀತಿಯೆಡೆಗೆ..
ಇರಲಾರೆ ಹೊರತಾದ ಪ್ರೀತಿಯೆಡೆಗೆ...

              -ಶಿವಪ್ರಸಾದ ಭಟ್ಟ


Tuesday, September 10, 2013

ಬೇಸರದ ದಾರಿಯಲಿ....!!!!

ಬೇಸರದ ದಾರಿಯಲಿ ದೂರಾಗದಿರೆ ಸಖಿ..
ದಾರಿ ಬೇಸರವಿಹುದು..ಪ್ರೀತಿಯಲ್ಲ..
ಸಂಜೆಯಲಿ ನೇಸರನ ಕಿರಣ ರಕ್ತದ ವರ್ಣ
ಶುಭ್ರವಾಗುವ ಕಾಲ ದೂರವಿಲ್ಲ..

ಬಹುದೂರವೀ ಹಾದಿ ಜೊತೆಯಾಗಿ ಹೊರಟಿಹೆವು..
ತ್ಯಜಿಸಬೇಕೆ ಇಂಥ ಮಧುರ ದಾರಿ..??
ನೋವು ನಲಿವಲೂ ನಿನ್ನ ಭುಜದಿ ಹೊರುವೆನು ಗೆಳತಿ
ಹೋಗಬೇಕೇ ನನ್ನ ಪ್ರೀತಿ ಮೀರಿ..??

ಜೀವ ದಾರಿಯ ಸತ್ಯ ಮಿಥ್ಯಗಳ ಸುಳಿವಲ್ಲೇ
ಪ್ರೀತಿ ಕೊರಗದೇ ಇರಲಿ ಭಾವ ಮರೆತು..
ನಿನ್ನ ಮಡಿಲಲೇ ನಾನು ಮಗುವಾಗಬೇಕಿನ್ನು
ನಿನ್ನ ಪ್ರೀತಿಯ ಲಾಲಿ ನನ್ನ ಬೆರೆತು..

              -ಶಿವಪ್ರಸಾದ ಭಟ್ಟ

Tuesday, August 27, 2013

ಭಾವವೀಣೆ



ಯಾವ ಮೌನಕೂ ಮಿಡಿಯುತಿದೆ ಮನ..
    ನಿನ್ನ ಮಾತಿಗೂ ಕಾಯುತ..
ಜೀವ ಭಾವದ ಪ್ರೀತಿ ಬೆಸುಗೆಗೆ
    ಕಾಲ ಸರಿದಿದೆ ಕಾಯುತ...

ಬಯಸಿ ಬಂದಿಹೆ ನಿನ್ನ ಬಳಿಗೆ
    ನೀಡು ಮನಸಿನ ಆಸರೆ..
ಕಾಯುತಿಹುದು ಕನಸೂ ನಿನ್ನ
    ಭೇಟಿ ನೀಡು ಆದರೆ...

ತನುವ ತಣಿಸುವ ಕಣ್ಣಿನಾಳದ
     ಭಾವ ಬೆಸೆದಿದೆ ಕಣ್ಣಲೇ..
ಜೀವಕೊಲಿಯುವ ಪ್ರೀತಿ ಗೆಳತಿಯ
     ಜೀವ ಬಯಸಿದೆ ಮನದಲೇ

ನಿನ್ನ ಪ್ರೀತಿಯ ಉಸಿರ ಉಸಿರಲೂ
     ಮನದ ಭಾವನೆ ಸ್ಪಂದನ
ಭಾವ ವೀಣೆಯ ಪ್ರೀತಿ ಸ್ವರದಲಿ
     ನನ್ನ ಜೀವನ ನಂದನ

                   
                                   -ಶಿವಪ್ರಸಾದ ಭಟ್ಟ

Sunday, August 11, 2013

ಮುಸ್ಸಂಜೆ ಮಾತು...




                                        ಅವಳಿಲ್ಲದ ಸಂಜೆಯಲಿ ಅವಳದೇ ನೆನಪು
                                       ಇರುವಾಗ ಬಾರದವಳು ಈಗೇಕೆ ಬಂದಳೊ..
                                         ಭಾವನೆಗಳೆಡೆ ನನ್ನ ಒಯ್ಯುತಿಹಳು..
                                           ಹೋಗದಿರು ಗೆಳತಿ ಮತ್ತೆ...
                                              ನಾನೇ ನೀನಾಗಿರುವಾಗ..
                                            ನಿನ್ನೊಳಗೇ ಅವಿತಿರುವಾಗ...

                                          ಮುಗಿಲಿನ ಕಡೆ ತಲೆ ಎತ್ತಿದರೂ
                                            ಹೊಳೆವ ನಿನ್ನ ಮುಖದ ಛಾಯೆ.
                                     ರೌದ್ರತೆಯ ಬಾನಿನಲೂ ಎಡೆಬಿಡದೆ ಕಾಣುತಿದೆ
                                            ನಿನ್ನ ಪ್ರೀತಿಯ ಒಲುಮೆ ಮಾಯೆ
                                         ಯಾಕೆ ಕಾಡುವೆಯೇ ಬಹುವಾಗಿ ನನ್ನನ್ನು
                                          ನಾನೇನ ಮಾಡಿರುವೆ..???ಪ್ರೀತಿ ಬಿಟ್ಟು...

                                       ಉಸಿರಲ್ಲಿ ಉಸಿರಾಗಿ ಜೊತೆಯಲ್ಲೇ ಇರುವೆ..
                                            ನನ್ನೊಡನೆ ಇರುವ ಕುರುಹೇನೆ?
                                      ನೀ ಇರುವ ನೆನಪುಗಳೇ ಮನದ ಅಂಗಳದಲ್ಲಿ
                                             ಅಲೆದಾಡುತಿವೆ ಗೆಳತಿ..
                                        ನನ್ನುಸಿರ ಬಿಸಿಗಾಳಿ ನಿನ್ನ ಸೋಕುವ ಮುನ್ನ
                                          ಬಂದುಬಿಡೆ ಇಂದು..ಹೋಗದಿರು ಎಂದೂ...




Friday, August 2, 2013

ಆಸೆ...



ಅಲೆವ ಮನಸಿಗೆ ಕೊನೆಯ ದಾರಿಯು ನೀ..
ಭ್ರಮೆಯ ಕನಸಿಗೆ ಕೊನೆಯ ಪಯಣವು ನೀ..
ಮನಸೋ ಕನಸೋ ತಲುಪುವ ಗಮನವು ನೀ..
ಕನಸಿನ ದರ್ಪಣ ಮನಸಿನ ಅರ್ಪಣ ನೀ

ಕಾಣದ ಮನಸಿನ ಸಾವಿರ ಕನಸಿಗೆ
ಉರಿವ ಹಣತೆಯಾಗು..
ನಿನ್ನೆಯ ದಾರಿಯ ಮುಂದಿನ ಪಯಣಕೆ
ದಾರಿದೀಪವಾಗು..

ನಿನ್ನನೆ ಶಾಶ್ವತ ಬಯಸುವ ಮನಕೆ
ಜೀವದ ಸೆಲೆಯಾಗೆ..
ಹೃದಯದ ಪ್ರೀತಿಯ ಸೆರಮನೆಯೊಳಗೆ
ಭಾವದ ನೆಲಯಾಗು


     
                               --ಶಿವಪ್ರಸಾದ ಭಟ್ಟ

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...