Wednesday, July 15, 2015

ಪೃಥ್ವಿ ಯೋಗ

ಪೂರ್ವ ದೇಶದ ಜನಗಳೊಮ್ಮೆ
ವಲಸೆ ಬಂದರು ಕಾಡಿನೊಳಗೆ
ಮನೆಯ ಕಟ್ಟಲು ಮರವ ಕಡಿದರು
ಕಾಡದಾಯಿತು ಬೆತ್ತಲೆ

ಜನರ ಕ್ರೌರ್ಯದ ಧ್ವನಿಯ ಒಳಗೆ
ಮರಗಳುದುರಿದ ಶಬ್ದ ಮೌನ
ಸೂರ್ಯ ಮೂಡುವ ಹೊತ್ತಿನೊಳಗೇ
ಕಾಣದಾಯಿತು ಕತ್ತಲೆ

ಕಾಲ ಉರುಳಿತು ನಗರ ಬೆಳೆಯಿತು
ವಂಶ ಜನಿಸಿತು ವರ್ಷ ಮರಳಿತು
ಬೀಜ ಬೆಳೆಯಲೂ ಜಾಗವಿಲ್ಲದೇ
ಕಲ್ಲು ಹೊಳೆಯಿತು ಸುತ್ತಲೂ

ದಾರಿ ಕಾಣದ ಹೊಗೆಯ ಮಧ್ಯವೇ
ಜೀವ ಸತ್ತಿತು ಮತ್ತೆ ಹುಟ್ಟಿತು
ಜಲಧಿ ಬತ್ತಿತು ಭೂಮಿ ಕೆಟ್ಟಿತು
ಕೂಗು ಕೇಳಿತು ಎತ್ತಲೂ

ಧ್ವನಿಸಿ ಕೂಗು ಜೀವಜಲಕೆ
ಪ್ರಾಣವಡಗಿತು ಭೂಮಿಯೊಳಗೆ
ಜಲದ ಮೂಲವ ಕೊಂದ ವಿಪ್ಲವ
ಫಲಿಸಿ ಮೊಳಗಿತು ಮನದಲಿ

ಯುವಕನೋರ್ವನು ತಪ್ಪು ಅರಿತನು
ಸಸ್ಯ ಬೆಳೆಸಲು ಮುಂದೆ ಬಂದನು
ಗಿಡವ ನೆಟ್ಟು ನೀರು ಉಣಿಸಿದ
ಪೃಥ್ವಿ ಶ್ಯಾಮಲೆ ಎನಿಸಲು

ತಿದ್ದಿಕೊಂಡರು ತಪ್ಪನೆಲ್ಲಾ
ಸಸ್ಯ ಸರಪಳಿ ಕಟ್ಟಹೊರಟರು
ತಂಪನೆರೆದರು ಭೂಮಿಗೆಲ್ಲಾ
ಹಸಿರು ಮೂಡಿತು ಎಲ್ಲೆಡೆ

ವರ್ಷ ಸುರಿಯಿತು ಮೂಲ ತಡೆಯಿತು
ಇಂಗಿ ನಿಂತಿತು ಪ್ರಾಣಜಲವು
ದಾಹ ತೀರಿತು ಪೂರ್ತಿಯಾಗಿ
ಕೂಡಿ ಕುಣಿದವು ಜನಗಳು

ಪೃಥ್ವಿಯೋಗವು ಹಸಿರ ಹೊರತು
ಸಫಲವಾಗದು ಎಂದೂ ಕೂಡಾ
ಹಸಿರು ಬೆಳೆಯಲಿ ಹಸಿರು ಉಳಿಯಲಿ
ವಾಯುವಾಗಲಿ ಸುಂದರ

ಜೀವ ಜನಿಸಲಿ ಜೀವ ಅಳಿಯಲಿ
ಹಸಿರು ಮಾಸದೇ ಇರಲಿ ಭೂಮಿ
ಸಸ್ಯಶ್ಯಾಮಲೆಯಾಗೇ ಇರಲಿ
ಉಳಿಯಲೆಂದಿಗೂ ಮನುಕುಲ

ಕೈಯ ಕಟ್ಟುವ ಒಂದುಗೂಡುವ
ಪೃಥ್ವಿಯುಳಿಸಲು ಎದೆಯ ಮುಟ್ಟುವ
ಪ್ರಕೃತಿ ಯೋಗಕ್ಷೇಮದೊಂದಿಗೆ
ಬಾಳಲೆಂದಿಗೂ ಸಂಕುಲ..!
ಬಾಳಲೆಂದಿಗೂ ಸೋಕುಲ..!
                   
                                           -ಶಿವಪ್ರಸಾದ ಭಟ್ಟ

Tuesday, March 17, 2015

ಶಬರಿ ಕಾದಿಹಳು....!!

ಶಬರಿ ಕಾದಿಹಳು ಇನ್ನೂ..
ಧೂಳಿನಲ್ಲಿ ದಾಶರಥಿಯ ಹೆಜ್ಜೆ ಗುರುತು ನೋಡುತ
ಬರುವ ಮತ್ತೆ ರಾಮ ಎಂದು ಕಣ್ಣು ಕಿರಿದು ಮಾಡುತ..
ಭದ್ರಬಾಹು ಶಬರಿ ಭಕ್ತಿ ಬಯಸಿ ಮತ್ತೆ ಬರಲಿ ಎಂದು
ಪಾದಕಾಗಿ ನಾದಕಾಗಿ ಶಬರಿ ಇನ್ನೂ ಮಿಡಿಯುತಿಹಳು
ಬರಲೇ ಇಲ್ಲ ರಾಘವ.. ಬರಲೇ ಇಲ್ಲ ರಾಘವ..

ಅಂದೂ ಕಾದಿದ್ದಳು ಶಬರಿ..
ಬಂದ ಅಂದು ರಾಮಭದ್ರ ಸೌಮಿತ್ರಿಯ ಸಹಿತ
ಜಾನಕಿಯನು ಅರಸುತ.. ಕಾಡಲೆಲ್ಲ ಅಲೆಯುತ..
ಕನಸಿನಲ್ಲೂ ಮನಸಿನಲ್ಲೂ ಮೈಥಿಲಿಯನೇ ನೆನೆಯುತ..
ಕಾಣಲಿಲ್ಲ ಶಬರಿ ಅಂದು ಭಕ್ತಿಸ್ಫೂರ್ತಿಯಾಗಿ..
ಮತ್ತೆ ರಾಮನನ್ನೇ ಬಯಸಿ ಕಾಯುತಿಹಳು ಶಬರಿ..
ಬರಲೇ ಇಲ್ಲ ರಾಘವ.. ಅಂದು ಹಾಗೆ ಹೋದವ..

ರಾಮ ರಾಮ ರಾಮ ಎಂದು ಜಪಿಸುತಿಹಳು ಶಬರಿ..
ಬರಲೇ ಬೇಕು ರಾಮಚಂದ್ರ ಶಬರಿ ಭಕ್ತಿ ನೋಡಲು
ವೈದೇಹಿ ಸಹಿತನಾಗಿ ಹಣ್ಣು ಬೇರು ತಿನ್ನಲು..
ಪಾದಕೊರಗಿ ಅಶ್ರು ಸುರಿವ ಭಾವಪೂರ್ಣ ಘಳಿಗೆಗಾಗಿ
ಇಳಿ ಸಂಜೆಯ ದೀಪಕಿನ್ನೂ ತೈಲ ಎರೆಯುತಿಹಳು ಶಬರಿ
ಬರಲೇ ಬೇಕು ರಾಘವ.. ಭಾವಮೂರ್ತಿಯೇ ಅವ..
                           -ಶಿವಪ್ರಸಾದ ಭಟ್ಟ

Friday, December 12, 2014

"ಹೊಸ ಕನಸು..ಹೊಸ ಮನಸು.. !"

ಕನಸುಗಳ ಅಂಗಳದಿ ಹೊಸ ಯಾತ್ರಿಯಾಗಮನ
ಹೊಸ ಕನಸುಗಳ ಕಡೆಗೆ ಜತೆಯಾಗಿ ಪಯಣ..
ಎಡೆ ಬಿಡದೆ ನುಡಿಯುತಿದೆ ಮನದ ವೀಣೆಯ ಗಾನ
ತುಂಬು ಹೃದಯದ ಗುರುತು ಮೊದಲನೆಯ ಕವನ..

ಹೊಸ ಕನಸು ಹಳತಾಗಿ ಮತ್ತೆರಡು ಕವಲೊಡೆದು
ಚಿಗುರು ಮೂಡಲು ಮತ್ತೆ ಶುಭರಾತ್ರಿ..ಹಗಲು..
ಆಕಾಶದಿಂ ಸುರಿವ ನಕ್ಷ್ತತ್ರಗಳ ನಡುವೆ
ಬೀಸಿ ಬರುತಿರೆ ಅಲರು.. ನಿನ್ನದೇ ಮುಗಿಲು..

ಮುಗಿಲು ಮುಳುಗುವುದೇಕೊ..ಕಡಲೂ ಕರಗುವುದೇಕೋ..
ಮನ ದೂರ ಕ್ರಮಿಸುವ ದಾರಿಯಿಲ್ಲ..
ನೆನಪ ಕುದುರೆಯನೇರಿ ಜೀನು ಸರಿಸುವ ಮೊದಲೇ
ಕನಸು ಕಳೆದರೆ ಮತ್ತೆ ಸಿಗುವುದಿಲ್ಲ..

ನೆನಪುಗಳ ಪದರಗಳ ಸುಳಿಗೆ ಸಿಲುಕಿದರೇನು
ಕನಸು ಬೀಳುವುದಿಲ್ಲ ನೆನಪುಗಳ ಕಳೆದು..
ಈ ಪ್ರೀತಿ ನದಿಯೋಡಿ ಶರಧಿ ಸೇರುವುದೆಂತು
ನನ್ನೊಡನೆ..ನಿನ್ನೋಡನೆ..ದೂರ ಸರಿದು..
                               
                                     - ಶಿವಪ್ರಸಾದ ಭಟ್ಟ

Thursday, February 20, 2014

"ತಿರುಗಿ ಬಾ ಗೆಳತಿ....!!"

ಕಾಡುವ ಕನಸಿನ ಕೊನೆಯ ನೆನಪೇ
ಕಾಡಿ ಕಾಡಿ ಕದಡುತಿದೆ..
ಎದೆಯ ಕದ ಬಡಿಯುತಿದೆ..
ತವಕದಲ್ಲಿ ಹೃದಯ ತೆಗೆದರೆ
ಬೀಸುವ ಗಾಳಿಯ ಸಂಗೀತವೇ ಹೊರತು
ಸುಳಿಯುವ ನಿನ್ನ ಮೆಲುವಾದ
ಗೆಜ್ಜೆಗಳ ಸಪ್ಪಳವಿಲ್ಲ..
ಪ್ರೀತಿಯ ನಿನ್ನ ಕರೆಯಿಲ್ಲ..
ಕೊನೆಗೂ ಕಾಣಲೇ ಇಲ್ಲ ನಿನು..

ಸಾಗರದ ಅಲೆಗಳ ನದುವೆ ಅಳಿಸಿಹೋದ
ನಿನ್ನ ಹೆಜ್ಜೆಯ ಗುರುತುಗಳನ್ನು ಅರಸಿದ್ದೇನೆ.
ನೀ ಹೋದ ದಾರಿಯಲ್ಲೇ ಅಲೆದಿದ್ದೇನೆ..
ನಿನ್ನ ಕಾಲುಂಗುರ ಹಿಡಿದು ಹುಡುಕಿದ್ದೇನೆ
ಮೃದುವಾದ ಕಾಲ್ಬೆರಳಿಗೆ ತೊಡಿಸಲೆಂದು..
ಸಿಗಲೇ ಇಲ್ಲ ಇಲ್ಲಿಯವರೆಗೂ..
ಬೆಳ್ಳಿಯ ಉಂಗುರ ಕೈಯಲ್ಲೇ ಕಾಯುತಿದೆ..
ಕನಸಲ್ಲಿ ಕೈ ಹಿಡಿದು ಕಾಲು ಕೊಡದೇ ಹೋದವಳೇ,
ಕಾಲುಂಗುರ ತೊಡಿಸುವೆ..ಒಮ್ಮೆ ಬಾ ಗೆಳತಿ..

                       -ಶಿವಪ್ರಸಾದ ಭಟ್ಟ

                        


Sunday, December 22, 2013

"ಸೋಲು-ಗೆಲುವು.."

ಸೋಲುತಿದೆ ಮನಸುಗಳ ಪ್ರೀತಿ ಭಾವದ ಕನಸು
ಕರಗುತಿದೆ ನಿನ್ನೊಲವು ಕಾಡಿ ಕಾಡಿ..
ಮನಸು ಪ್ರೇಮದ ಗಂಗೆ ಹರಿವ ಭಾವದ ಕೂಸು
ಅಳುತಲಿದೆ ನೀ ನಡೆದ ದಾರಿ ನೋಡಿ..

ಗೆಲುವಿನೆಡೆಯಲಿ ಎಡವಿ,ನೀ ಕಳೆದ ನೆನಪುಗಳೆ
ಕೆಣಕುತಿವೆ ಅಣಕಿಸುತ ನನ್ನ ಸೊಲು..
ಸೋಲು ಗೆಲುವಿನ ನಡುವೆ ಅಂತರದ ಕಂದಕವ
ಅಳೆಯಬಹುದೇ ನಿನ್ನ ಅಳತೆಗೋಲು??

ಜಯಿಸುವುದು ಜೀವನವ ನಿನ್ನ ಪ್ರೀತಿ ಹಾರೈಕೆ
ಸೋಲಿಸಿದೆ ಸ್ಥೈರ್ಯವನೆ ಏಕಾಂತ ಭಾವ..
ಮರೆಸಿಬಿಡು ಬೇಸರವ ಜೀವ ಮರೆಯುವ ಮೊದಲೇ
ಗೆಲ್ಲಿಸಲಿ ಮತ್ತೊಮ್ಮೆ ಪ್ರೀತಿ ಪ್ರಭಾವ..
                  -ಶಿವಪ್ರಸಾದ ಭಟ್ಟ

Friday, November 22, 2013

"ಆಶಯ..!!"

ನೀನೇ ಕಾಣುವ ಕನ್ನಡಿಯಲ್ಲೂ
ಮಸುಕಿನ ಬಿಂಬದ ಶೃಂಗಾರ..
ಹರಿಯುವ ನೀರಿನ ನೆರಳಿನ ದಾರಿಗೂ
ಮೂಡಿದೆ ನಿನ್ನದೇ ಆಕಾರ..

ಜೀವ ಸೋಕುತಿಹ ಪ್ರೀತಿಯ ಗಾಳಿಗೆ
ಆಸರೆ ಬೇಕಿದೆ ಪ್ರೀತಿಯದೇ..
ಹೃದಯ ಸೋಲುತಿಹ ಒಲವಿನ ದಾಳಿಗೆ
ಹೆದರಿಕೆ ಇಂದಿಗೂ ಕನಸಿನದೇ..

ಕನವರಿಕೆಯ ಕರೆಯೋಲೆಯು ಕೂಗಿದೆ
ನಿನ್ನದೇ ಪ್ರೀತಿಯ ಪ್ರತಿ ಇರುಳು..
ಇನ್ನೂ ತಾಗಲಿ ನನ್ನಯ ಕಣ್ಣನು
ಗಾಳಿಗೆ ತೇಲುವ ಮುಂಗುರುಳು..

ಬಯಸಿದೆ ತನು-ಮನ ಈಗಲೂ ನಿನ್ನಯ
ಭುಜವನು ಒಮ್ಮೆಲೆ ಒರಗಿರಲು..
ತೆರೆದಿದೆ ಈ ಮನದರಮನೆ ಬಾಗಿಲು..
ಬಲಗಾಲಿಡು..ನೀ ಒಳಬರಲು..

                                  
                                                   -ಶಿವಪ್ರಸಾದ ಭಟ್ಟ

Monday, November 4, 2013

"ಕಡಲಿನ ಕೂಗು.."

ಕಡಲೂ ಕರೆಯಿತೆ ನೆನಪಿನಾಳಕೆ
ಸಂಜೆ ಸೂರ್ಯನ ಬಾನಿಗೆ..
ತೆರೆಗಳಿಳಿಯಿತೆ ಹೃದಯ ಬಾನಿಗೆ
ಮೌನ ಮಾತಿನ ದೀವಿಗೆ..

ಕಡಲಿನಲೆಗಳು ಕೆಣಕುತಿಹವು
ನೀನಿರದ ಈ ತೋಳನು..
ಬಂದು ಕೈ ಹಿಡಿ ಮರೆವ ಮೊದಲೇ
ಪ್ರೀತಿ ಕಡಲಿನ ಒಡಲನು..

ನೀರು ತೋಯುವ ಮರಳ ಕಣದಲೂ
ನಿನ್ನ ಹೆಸರೇ ಬರೆದೆನು..
ಮನದಿ ಹರಿದಿಹ ಪ್ರೀತಿಯನ್ನು
ಜಾರದಂತೆ ಕರೆದೆನು..

ಇಂದು ಮುಳುಗಿದ ಸೂರ್ಯ ಕಿರಣವು
ನಾಳೆ ಮತ್ತೆ ಹೊಮ್ಮಲಿ..
ಮನದ ಮಳಲಲೂ ನಿನ್ನ ಹೆಸರೇ
ಜೀವವಾಗಲಿ..ಚಿಮ್ಮಲಿ..
       
            - ಶಿವಪ್ರಸಾದ ಭಟ್ಟ

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...