Thursday, October 10, 2013

ಮತ್ತದೇ ಏಕಾಂತ..!!!!


ಅವಳಿಲ್ಲದ ಸಂಜೆಯಲ್ಲಿ ಅವಳದೇ ನೆನೆಪುಗಳೊಡನೆ ಪಡುವಣ ದಿಗಂತದೆಡೆ ಮುಖ ಮಾಡಿ ಕುಳಿತಿದ್ದೆ.ಅವಳಿಲ್ಲದಾಗಲೂ ಅವಳ ಮುಖ ಸ್ಫುಟವಾಗಿ ಎದುರಿಗಿತ್ತು.ಪಡುವಣ ಬಾನಿನ ನೀಲಿಯ ಚಂದ್ರ ನನ್ನನ್ನೆ ಅಣಕಿಸುತ್ತಿದ್ದ.ಎದೆಯೊಳಗಿನ ನೀರವ ಮೌನ ಹೊರಬರಲು ತವಕಿಸುತ್ತಿತ್ತು..ಹಪಹಪಿಸುತ್ತಿತ್ತು..ಒಂದು ಘಳಿಗೆಯೂ ದೂರ ಹೋಗದ ಅವಳು ನನ್ನಿಂದ ಬಹುದೂರ ಓಡಿದಂತೆ ಭಾಸವಾಯಿತು.ಹರಿಯುವ ನದಿಯ ಸಾಗರ ಸೇರುವ ತವಕ ಅವಳಲ್ಲಿಂದು ಕಾಣಲಿಲ್ಲ.ಕಡಲಿಂದ ಬೇರೆಯಾದ ಮೋಡದ ಸ್ನಿಗ್ಧತೆ ಅವಳ ಮೋಹಕತೆಗೆ ಹೋಲುತ್ತಿತ್ತು.ಇಂದು ಅದೇಕೋ ಅಂದಗಾತಿಯಾಗಿ ಕಂಡವಳು ಹಾಗೆಯೇ ಹೊರಟು ಹೋದಳು.ಪ್ರೀತಿ  ಸುಳಿ ಮಿಂಚಿನಲ್ಲಿ ಒಮ್ಮೆ ಮಿಂಚಿ ಮರೆಯಾದಳು.ಮಿಂಚಿನ ಬೆಳಕಲ್ಲಿ ಕಂಡ ಮುಖ ಮನದಲ್ಲಿ ಅಚ್ಚೊತ್ತುವ ಮೊದಲೇ ಕತ್ತಲಿನಲ್ಲಿ ಮಾಯವಾದಳು.ಹುಚ್ಚು ಮನಸ್ಸಿನ ಹತ್ತಾರು ಪರಿವೆಯಲ್ಲಿ ಏನೆಂದು ಚಿಂತಿಸಲಿ??ಕತ್ತಲಿನಿಂದ ಬೆಳಕಿನೆಡೆ ಕೊಂಡೊಯ್ಯುವ ಜ್ಯೋತಿ ಆರಿಹೋಯಿತೆನ್ನಿಸಿದಾಗ ತೈಲ ಎರೆದರೂ ಪ್ರಯೋಜನವೇನು??ಮತ್ತೆ ಅವಳು ಕಾಣಲು ಆ ಮಿಂಚಿಗೆ ಕಾಯಬೇಕೆ??ಸುಳಿಗಾಳಿಯಾದರೂ ಎದಿದ್ದರೆ ತಿರುಗುವಧೂಳಿನ ಕಣದಲ್ಲಿ ಅವಳನ್ನೇ ಕಾಣಬಹುದಿತ್ತೇನೋ..ಅವಳ ಹಂಬಲ ಮೋಡಗಳಾಗಿ ಗುಡುಗಿದ್ದರೆ ಗುಡುಗಿನಲ್ಲಿಯೂ ನನ್ನವಳ ಕರೆ ಕೇಳಬಹುದಿತ್ತೇನೋ..ಆದರೆ ವಿಧಿಯ ಕಪಟ..ಇಂದು ಮಳೆ ಬರುವ ಹಾಗಿದ್ದರೂ ಬರಲೇ ಇಲ್ಲ..
    ಅವಳಿಲ್ಲದ ವಾತಾವರಣವನ್ನು ನಾನು ಎದಿರಿಸಿದ್ದು ಇದೇ ಮೊದಲು.ನನ್ನೊಳಗೆ ನಾನಾಗಿ ನಗುತ್ತಿದ್ದವಳು ಹೊರಟು ಹೋಗಲಾರಳು ಎಂಬ ಹುಚ್ಚು ಧೈರ್ಯ ಕುಗ್ಗಿತ್ತು.ಮುಳುಗಿದ ಸೂರ್ಯನನ್ನು ಕಂಡೊಡನೆ ಇವಳೂ ಹೀಗೆ ನನ್ನ ಬಾಳಿನಲ್ಲಿ ಮುಳುಗದಿರಲಿ ಎಂಬ ಆರ್ದ್ರತೆ,ದೀನತೆ ಕೊರಗಿದ ಮನಸ್ಸಿನಲ್ಲಿ ಕನಸುಗಳನ್ನು ಕರಗಿಸುತ್ತಿತ್ತು.ನಾನು ನಿಜವಾದ ಪ್ರೇಮಿಯೆಂದು ಎದೆ ತಟ್ಟಿ ಹೇಳಲಾರೆ.ಆದರೆ ಅವಳಿಲ್ಲದ ಬಾಳಿನ ಕಲ್ಪನೆಯೇ ನನ್ನನ್ನು ನಶ್ವರದೆಡೆ ಸೆಳೆದಿರಬೇಕಾದರೆ ಅವಳಿಲ್ಲದೇ ನಾನು ಇರಬಲ್ಲೆನೇ??ಅವಳಿಲ್ಲದ ಏಕಾಂತ ಸುಖ ಕೊಡಲಿಲ್ಲ..ಕೊನೆಗೂ ಕೊಡಲಿಲ್ಲ..
    ಅವಳೇಕೆ ಹೀಗೆ ಸನಿಹ ಎಂಬ ಪ್ರಶ್ನೆಗೆ ಉತ್ತರಿಸುವ ಜಾಣ್ಮೆ ನನ್ನಲ್ಲಿಲ್ಲ.ಆದರೆ ಅವಳನ್ನು ಸನಿಹದಲ್ಲೇ ಕಾಣುವ ಬಯಕೆಗೆ ಪ್ರಶ್ನೆಯಿಲ್ಲ..ಈ ವಯಸ್ಸಿನ ಪ್ರೀತಿ ಕೇವಲ ಅಸಂಬದ್ಧ ಎಂಬ ಮಾನಸಿಕ ನಿಲುವುಗಳಿಗೆ ನಾನು ಬದ್ಧನಾದವ ನಾನಲ್ಲ.ಅವಳು ಬರುವಾಗ ಗೌರವಿಸಿದ್ದೇನೆ..ಇರುವಾಗಲೂ ಗೌರವಿಸಿದ್ದೇನೆ..ತಮ್ಮ ವಯಕ್ತಿಕ ಹಿತಾಸಕ್ತಿಗೋಸ್ಕರ ಪ್ರೀತಿಸುವವರ ಬವಣೆಯ ಗೋಜಿನಲ್ಲಿ ಪ್ರೀತಿಯ ಸ್ವಚ್ಛಂದತೆ ಸಾಧ್ಯವಾದೀತೆ??ಜನಾಂಗ ಬದಲಾಗಿದೆ..ಜನರೇಶನ್ ಹೊಸತನ ಬಯಸುತ್ತಿದೆ.ಆದರೆ ನನಗೆ ನನ್ನ ಹಳೆಯತನ ನೆನಪಾಗುತ್ತಿದೆಯಲ್ಲ..ಎದೆಯಲ್ಲಿನ ಹವಾಮಾನ ವೈಪರಿತ್ಯವೇ ಕಾರಣವಾಗಿರಬಹುದು..ಸುರಿದ ಮೋಡ ಕರಗುವಂತೆ ಬಾಳಿನಲ್ಲಿ ಇಲ್ಲವಾದರೆ ಅರ್ಥವಿಲ್ಲವಾದೀತು.ಏನೇ ಆದರೂ ಪ್ರೀತಿ ಕರಗುವುದಿಲ್ಲ.
    ಅವಳು ಬಂದ ಈ ದಿನಗಳಲ್ಲಿ ನಾನೆಂದೂ ಅವಳ ಪ್ರೇಮಿಯಾಗಲಿಲ್ಲ..ಹಿಂದೆ ತಿರುಗಲಿಲ್ಲ.ಆದರೂ ಮನದ ಮೂಲೆಯ ವಿರಹಕ್ಕೆ ಅವಳೇಕೆ ಕಾರಣಳು ಎಂಬ ಪ್ರಶ್ನೆ ಹಲವಾರು ಬಾರಿ ಮನದಲ್ಲಿ ಮೂಡಿ ಮರೆಯಾಗಿದೆ.ನನ್ನೊಳಗೆ ಹೊಸ ಚೈತನ್ಯದ ಜೀವಕನಸು ಮೂಡಿಸುವ ಅವಳ ಸ್ಪೂರ್ತಿ ಕಾಣದ ಕೈ ಅಲ್ಲ.ನನ್ನೊಳಗೆ ನಾನಾಗಿ ನನ್ನೆಲ್ಲ ಕುರುಹುಗಳಿಗೂ ಬೆಂಬಲಿಸಿದ್ದಾಳೆ..ಪ್ರೀತಿಸಿದ್ದಾಳೆ..ಆ ಪ್ರೀತಿಗೆ ನಾನು ಕೃತಜ್ನ..ಆದರೆ ಈ ಏಕಾಂತವೇ ಹೀಗೆ ಬೇಸರ ತರಿಸಿತಲ್ಲ..ಅವಳಿಗಿದು ಕಾಣದೇ ಹೋಯಿತಲ್ಲ..ಎದೆಯೊಳಗಿನ ಮೌನದ ಅವಳ ಧ್ಯಾನದ ಕೂಗು ಅವಳಿಗೆ ಕೇಳದೇ ಇದ್ದುದ್ದರಲ್ಲಿ ತಪ್ಪಿಲ್ಲ..ಅವಳಿಗೂ ನನ್ನ ಹೊರತಾದ ಪ್ರಪಂಚವಿದೆ ಎಂಬ ಸತ್ಯದ ಕಠೋರತೆಯನ್ನು ನಿಧಾನವಾಗಿ ಅರಗಿಸಿಕೊಳ್ಳುತ್ತಿದ್ದೇನೆ.ಆದರೂ ಅವಳು ಹೋದ ದಾರಿಯಲ್ಲಿ ಹೆಜ್ಜೆಗುರುತುಗಳನ್ನು ನೋಡುತ್ತಿರುತ್ತೇನೆ..ಅವಳ ಕಾಲ್ಗೆಜ್ಜೆಯ ದನಿಗೆ ಕಾಯಿತ್ತಿರುತ್ತೇನೆ..
   ನಮ್ಮ ಋಣಾನುಬಂಧದ 'ಸಿಂಹಾವಲೋಕನ'ದ ಅವಶ್ಯಕತೆಯಿಲ್ಲ.ಅವಳು ನನ್ನೊಡನೆ ಕಳೆದ ಪ್ರತಿ ಸಮಯವೂ ಹಸಿರಾಗಿರುತ್ತದೆ.ನನ್ನ ಜೀವನದ ಚೈತ್ರ ಮುಗಿಯುವುದೇ ಇಲ್ಲ ಅವಳ ನೆನೆಪಿರುವವರೆಗೂ..ನನ್ನ ಪ್ರೀತಿಯನ್ನು ಯಾರೂ ಅಳೆಯಬೇಕಿಲ್ಲ..ನಾನವಳ ನಿಜವಾದ ಸಂಗಾತಿ..ಬಾಳ ಸಂಗಾತಿ..ಭಾವ ಸಂಗಾತಿ..ಆ ತೃಪ್ತಿ ಸಾಕು ನನಗೆ.ಅವಳ ಪ್ರೀತಿಯ ಪಿಸುದನಿ ಇನ್ನೂ ಕಿವಿಯಲ್ಲಿ ಗುನುಗುನಿಸುತ್ತಿದೆ.ಆ ಒಂದು ಸ್ವರ ನನ್ನೆಲ್ಲಾ ಚಹರೆಗಳಿಗೆ ಮುನ್ನುಡಿಯಾಗಬಲ್ಲದು.
    ನಿಜವಾಗಿಯೂ ಈ ಪ್ರೀತಿಯೇ ಹಾಗೆ..ನಿಜವಾಗಿ ಪ್ರೀತಿಸುವವರನ್ನು ತನ್ನಲ್ಲೇ ಅಡಗಿಸಿಕೊಂಡುಬಿಡುತ್ತದೆ..ಮನೆಯೊಳಗೆ ಮಡದಿಯಿಲ್ಲದಾಗ ಮಲ್ಲಿಗೆಯ ಕಂಪಿಗೆ ಅರ್ಥವಿಲ್ಲ.ಆದರೆ ಕಾಲ್ಗೆಜ್ಜೆಯ ಸಪ್ಪಳವಿಲ್ಲದೇ,ಕೈ ಬಳೆಗಳ ನಾದವಿಲ್ಲದೇ ಹೃದಯದ ಅರಮನೆ ಬಿಕೋ ಎನ್ನುತ್ತಿರಲೂ ಅವಳು ಬರಲೇ ಇಲ್ಲವಲ್ಲ..ಅವಳು ನನ್ನಿಂದ ದೂರ ಹೋದರೂ ಈ ಮನದ ಹೊಸಿಲು ದಾಟಲು ಸಾಧ್ಯವಿಲ್ಲ..ಎಂದೆಂದೂ ಅವಳ ಭುಜಕ್ಕೆ ಒರಗಿ ಕೂರುವಾಸೆ..ಅವಳ ಬರುವಿಕೆಗಾಗಿ ಕಾಯುತ್ತಿದ್ದೇನೆ..ಬರುತ್ತಾಳೆ..ಅವಳು ಹೋದ ದಾರಿಯಲ್ಲಿ ಹುಚ್ಚನಂತೆ ಅಲೆದಿದ್ದೇನೆ.ಅವಳ ಹೆಜ್ಜೆಗುರುತಿನಲ್ಲೇ ಕಾದಿದ್ದೇನೆ..ಮರಳಿ ನನ್ನರಸದೇ ಇರುವಳೇ??
    ಅವಳಿಲ್ಲದ ಬದುಕಿನ ಸಂದಿಗ್ಧತೆಯಲ್ಲಿ ಸ್ಪೂರ್ತಿ ತುಂಬುವ ಜೀವವಿಲ್ಲದೇ ನಲುಗುತ್ತಿದ್ದೇನೆ..ನಡುಗುವ ಎದೆಯ ಮೇಲೆ ಕೈ ಇಟ್ಟು ಬಡಿತ ಹೆಚ್ಚಿಸು ಗೆಳತಿ..ಒಮ್ಮೆ ಕಣ್ಣೀರು ಒರೆಸಿ ಹಣೆಯ ಚುಂಬಿಸು ಗೆಳತಿ..ನೀ ಇಲ್ಲದ ದುಃಖ ಇಂದೇ ಕೊನೆಯಾಗಲಿ..ಬಂಡುಬಿಡೆ ಒಮ್ಮೆ..ನಿನ್ನ ಪ್ರತಿ ಹೆಜ್ಜೆಗೂ ನೆರಳಾಗಿರುತ್ತೇನೆ.ಕಾವಲಿಗೆ ಪುಟ್ಟ ಹೃದಯವಿದೆ.ಕಾಲ್ತೊಳೆದು ಒಳಗೆ ಕರೆವೆ..ಬಲಗಾಲಿಟ್ಟು ಬಾ ಮತ್ತೆ..ನೀನಿರದೇ ಬದುಕದ ಜೀವದ ಅಂತರಂಗದ ಶಾಶ್ವತ ಬಡಿತ ನೀನಾಗು.ನೀನೇ
ಆಗು..ನಿನ್ನೊಲವಿನ ಸ್ವಾಗತಕ್ಕೆ ಕೆಲವೇ ಸಾಲುಗಳು ಸಾಕೆ.."ನೀ ನಡೆವ ಹಾದಿಯಲ್ಲಿ ನಾ ಕಾಣಲಿಲ್ಲ..ಕಾಣುವ ತವಕ ನನ್ನೆಡೆಗೆ..ನಾ ಕಂಡೆ ನಿನ್ನ ಕಣ್ಣಲ್ಲಿ..ನೀ ನಡೆದ ಹಾದಿಯ ಮಣ್ಣಲ್ಲಿ.. ನೋವಾಗದಿರುವುದೇ ನೀ ಇಲ್ಲವಾದರೆ??ನೀ ಬದುಕಬಹುದೇನೆ ನಾ ಇಲ್ಲವಾದರೆ??ಬಂದುಬಿಡು ಗೆಳತಿ..ಬಂದು ಒಮ್ಮೆ ಕೂಗು 'ಒಳಗೆ ಬರಲೇ'???"..
                                                                                                                 - ಶಿವಪ್ರಸಾದ ಭಟ್ಟ

No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...