Sunday, July 31, 2016

ದೇವಯಾನಿ

ಸೂರ್ಯಾಸ್ತ ಸಮೀಪಿಸುತ್ತಿತ್ತು. ಕಚ ಶುಕ್ರಾಚಾರ್ಯರ ಆಶ್ರಮದೆದುರು ನಿಂತಿದ್ದ. ತಂದೆಯನ್ನು ಕೂಗಿ ಒಳಗೋಡಿದ ದೇವಯಾನಿಯ ಮಂಪರಿನಲ್ಲಿ ತೇಲಿ ನಿಂತಿದ್ದ. ಅಮರಾವತಿಯಿಂದ ದಾನವ ಗುರುವಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದವ ದೇವಯಾನಿಯಲ್ಲಿ ಮೋಹಿತನಾಗಿದ್ದ. ಗುರುವನ್ನರಸಿಬಂದವನಿಗೆ ಗುರುಪುತ್ರಿಯ ಸೆಳೆತ ಬಲವಾಗಿ ಬೇರೂರಿತು. ತಂದೆಯನ್ನು ಕೂಗಿ ಒಳನಡೆದವಳ ಸುಳಿವೂ ಸಿಗಲಿಲ್ಲ. ಸುಮ್ಮನೇ ಯೋಚಿಸುತ್ತಾ ನಿಂತ. ಮನಸ್ಸಿನ ಮೂಲೆಯಲ್ಲಿ ದೇವಯಾನಿಯ ಗುಂಗು ಕಾಡತೊಡಗಿತು.
ಕಚ ಸಾಮಾನ್ಯನಲ್ಲ. ದೇವಾಂಶ ಸಂಭೂತ. ಸ್ಫುರದ್ರೂಪಿ. ಬೃಹಸ್ಪತಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಕಲಿತವನು. ಆದರೆ ದೇವಗುರುವನ್ನು ಬಿಟ್ಟು ದಾನವ ಗುರು ಶುಕ್ರಾಚಾರ್ಯರಲ್ಲಿ ವಿದ್ಯೆ ಕಲಿಯುವ ಆದೇಶ ಅಮರಾಧಿಪನಿಂದ ಯಾಕೆ ಬಂತೋ ತಿಳಿದಿರಲಿಲ್ಲ. ಶುಕ್ರಾಚಾರ್ಯರಿಗೆ ಅಸುರರೊಡನೆ ಇದ್ದು ರಾಕ್ಷಸೀ ಪ್ರವೃತ್ತಿ ಮೈಗೂಡಿದೆಯೆಂದು ಕೇಳಿದ್ದ ಕಚ. ಇಂಥಾ ಸಿಡುಕನಲ್ಲಿ ಒಬ್ಬ ಸಾಧಾರಣ ಬ್ರಾಹ್ಮಣಕುಮಾರನಂತೆ ವಿದ್ಯೆ ಕಲಿಯುವ ಅವಶ್ಯಕತೆ ಏನೆಂದು ಅರ್ಥವಾಗಿರಲಿಲ್ಲ. ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು ತೂರಾಡುತಿದ್ದವು. ಉತ್ತರಕ್ಕಾಗಿ ಹಪಹಪಿಸುತ್ತಿದ್ದವು.

ದಿನಗಳುರುಳುತ್ತಿದ್ದವು. ಕಚ ಅಮರಾವತಿಯಿಂದ ಬಂದ ಸಂದೇಶದ ಬಗ್ಗೆ ಚಿಂತಿತನಾಗಿದ್ದ. ಕೆಲವು ದಿನಗಳ ಹಿಂದೆ ಇಂದ್ರ ಸ್ಪಷ್ಟ ಸಂದೇಶ ಕಳುಹಿಸಿದ್ದ. "ಮೃತಸಂಜೀವಿನಿ." ದಾನವ ಗುರು ಶುಕ್ರಾಚಾರ್ಯನಿಗೆ ಮಾತ್ರ ತಿಳಿದ ಸತ್ತವರನ್ನು ಬದುಕಿಸುವ ವಿದ್ಯೆ. ಇದರಿಂದಲೇ ದಾನವರು ಮೆರೆಯುತ್ತಿದ್ದುದು. ಅದು ದೇವತೆಗಳಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಮೋಸದಿಂದ ಕಚನನ್ನು ವಿದ್ಯೆ ಕಲಿಯಲು ಕಳುಹಿಸಿದ್ದ. ಆದರೆ ಕಚ ದ್ವಂದ್ವದಲ್ಲಿ ಸಿಲುಕಿದ್ದ. ಗುರು ಕಲಿಸಿದ್ದನ್ನು ಕಲಿಯುವುದು ಸಂಸ್ಕೃತಿ. ಕಲಿಕೆಯ ಬೇಡಿಕೆಯನ್ನು ಗುರುವಿನ ಮುಂದಿಡುವುದು ಸರಿಯಲ್ಲ. ಸಮಯಕಾಗಿ ಕಾಯುತ್ತಿದ್ದ. ಆದರೆ ದೇವಯಾನಿಯ ಪ್ರೀತಿಯೂ ಹೆಚ್ಚಾಯಿತು..
ಕಚನೇನೋ ಶೃಧ್ಧೆಯಿಂದ ಎಲ್ಲಾ ವಿದ್ಯೆಗಳನ್ನು ಕಲಿಯತೊಡಗಿದ್ದ. ಆದರೆ ಇಡೀ ಅಸುರಕುಲ ಅವನನ್ನು ಕಂಡು ಅಸೂಯೆ ಪಡುತ್ತಿತ್ತು. ಯಾವನೋ ಬ್ರಾಹ್ಮಣಕುಮಾರನೆಂದು ಬಂದ ತಕ್ಷಣ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದಕ್ಕೆ ಅವನನ್ನು ಕೆಂಗಣ್ಣಿನಿಂದ ನೋಡುತ್ತಿತ್ತು. ದೇವಯಾನಿಯ ಜೊತೆ ಇರುವ ಎಲ್ಲಾ ಸಮಯದಲ್ಲೂ ಕೊಲ್ಲುವ ಹಾಗೆ ಭಾಸವಾಗುತ್ತಿತ್ತು. ಸಮಯಕ್ಕಾಗಿ ಕಾದು ಕುಳಿತವರಂತೆ ಕಾಣುತ್ತಿದ್ದರು ಅಸುರರು. ಬೃಹಸ್ಪತಿ ಮೊದಲೇ ಎಚ್ಚರಿಕೆ ನೀಡಿದ್ದರು. ಅಸುರಕುಲ ಕಚನನ್ನು ನಾಶ ಮಾಡಬಹುದೆಂದು. ಎಲ್ಲದಕ್ಕೂ ಸಿದ್ಧನಿದ್ದ ಕಚ.. ದೇವಯಾನಿಗಾಗಿ..


ಸಂಜೆಯಾಗುತ್ತಿತ್ತು. ಕಚ ಉರುವಲಿಗಾಗಿ ಕಾಡಿಗೆ ಹೋದವ ಹಿಂದಿರುಗಲಿಲ್ಲ. ದೇವಯಾನಿಯ ಮನಸ್ಸು ಭಯದಿಂದ ಕಂಪಿಸುತ್ತಿತ್ತು. ಕಚ ಎಲ್ಲಿರಬಹುದೆಂದು ತವಕಿಸುತ್ತಿತ್ತು. ತಂದೆಯಲ್ಲಿ ತನ್ನ ಸಂಕಟ ಹೇಳಿದಳು. ಇಬ್ಬರೂ ಕಚನನ್ನು ಹುಡುಕಹೊರಟಾಗ ಸೂರ್ಯ ತನ್ನ ಕೆಲಸಮುಗಿಸಿ ಹೊರಡಲು ಸಜ್ಜಾಗಿದ್ದ. "ಕಚ..!ಎಲ್ಲಿರುವೆ ಮಗೂ?" ಶುಕ್ರಾಚಾರ್ಯರು ಕಾಡಿನ ದಾರಿಯಲ್ಲಿ ನಿಂತು ಕೂಗಿದಾಗ ಸೂರ್ಯ ಸರಿಸುಮಾರು ಮರೆಯಾಗಿದ್ದ. "ನಾನಿಲ್ಲಿ ತೋಳಗಳ ಹೊಟ್ಟೆಯಲ್ಲಿದ್ದೇನೆ ಗುರುದೇವಾ" ಕಚನ ಧ್ವನಿ ಸ್ಪಷ್ಟವಾಗಿತ್ತು. ದೇವಯಾನಿ ಅತ್ತಳು. ಅವಳ ಎಣಿಕೆ ನಿಜವಾಗಿತ್ತು. ಅವನಲ್ಲಿ ಅಸೂಯೆ ಹೊಂದಿದ್ದ ಯಾರೋ ಅವನನ್ನು ಕೊಂದು ತೋಳಗಳಿಗೆ ಹಂಚಿದ್ದರು. ಶುಕ್ರಾಚಾರ್ಯ ಮಗಳಿಗೆ ಸಮಾಧಾನ ಹೇಳಿ, ಮೃತ ಸಂಜೀವಿನಿ ಪಠಿಸಿದರು. ಕಚನನ್ನು ಕರೆದರು. ಏನೂ ಆಗದವನಂತೆ ಕಾಡಿನ ಮಧ್ಯದಿಂದ ಎದ್ದು ಬಂದ ಕಚ.

ಕೆಲದಿನಗಳು ಕಳೆಯಿತು. ಮತ್ತೆ ಒಂದು ಸಂಜೆ ಕಚ ಹಿಂದಿರುಗಲಿಲ್ಲ. ದೇವಯಾನಿ ಮತ್ತೆ ಕಣ್ಣೀರಾದಳು. ಶುಕ್ರಾಚಾರ್ಯರೊಂದಿಗೆ ಮತ್ತೆ ಕಚನನ್ನು ಹುಡುಕಹೊರಟಳು. "ಕಚ..!ಎಲ್ಲಿದ್ದೀಯಾ ಮಗೂ?" ಶುಕ್ರಾಚಾರ್ಯರ ಕರೆ ಮರುಧ್ವನಿಸಿತು. "ಪ್ರಪಾತದಲ್ಲಿರುವೆ ಗುರುಗಳೇ" ಕಚ ಉತ್ತರಿಸಿದ. ಶುಕ್ರಾಚಾರ್ಯರ ನಿರೀಕ್ಷೆ ನಿಜವಾಗಿತ್ತು. ತೋಳಗಳ ಬಾಯಿಂದ ಬದುಕಿ ಬಂದ ಕಚನನ್ನು ಮತ್ತೆ ಕೊಂದು ಪ್ರಪಾತಕ್ಕೆ ಎಸೆದಿದ್ದರು. ದೇವಯಾನಿಯ ಮನಸು ಛಿದ್ರವಾಯಿತು. ಮಗಳನ್ನು ಸಮಾಧಾನಿಸಿ ಮತ್ತೆ ಮೃತ ಸಂಜೀವಿನಿ ಪಠಿಸಿದರು, ಕಚನನ್ನು ಕರೆದರು. ಏನೂ ಆಗದವನಂತೆ ಕಚ ಪ್ರಪಾತದಿಂದ ಮೇಲೆದ್ದು ಬಂದ. ಮೂವರೂ ಆಶ್ರಮಕ್ಕೆ ಮರಳಿದರು.

ತಿಂಗಳನಂತರ ಮತ್ತದೇ ಘಟಿಸಿತು. ಕಚ ಮತ್ತೆ ಕಣ್ಮರೆಯಾದ. ಶುಕ್ರಾಚಾರ್ಯರು ಶಿಷ್ಯರ ಮೇಲೆ ಸಿಟ್ಟಾದರು. ದೇವಯಾನಿ ಆಹಾರ ತ್ಯಜಿಸಿದಳು. ಎಲ್ಲಾ ಕಡೆ ಹುಡುಕಿದರು, ಕಚ ಸಿಗಲಿಲ್ಲ. ಕಾಡಿನ ಮಧ್ಯದಲ್ಲಿ, ನದಿಯ ದಡದಲ್ಲಿ ಎಲ್ಲೂ ಕಚನ ಸುಳಿವಿಲ್ಲ. ಕಚನನ್ನು ಮತ್ತೆ ಕರೆದರು ಗುರುಗಳು. "ಕಚ..!ಎಲ್ಲಿರುವೆ ಮಗೂ.."
"ಇಲ್ಲೇ ನಿಮ್ಮ ಹೊಟ್ಟೆಯಲ್ಲಿದ್ದೇನೆ ಗುರುದೇವಾ" ಉತ್ತರ ಕೇಳಿ ಎದೆ ನಡುಗಿತು ಶುಕ್ರಾಚಾರ್ಯರಿಗೆ. ಅಂದರೆ ಮಧ್ಯಾಹ್ನದ ಊಟದಲ್ಲಿ ಗಂಜಿಯಲ್ಲಿ ಸೇವಿಸಿದ್ದು ಅನ್ನವಲ್ಲ. ಕಚನ ಅಸ್ಥಿ.!ತಾನು ಕಚನನ್ನು ಬದುಕಿಸುತ್ತೇನೆಂದು ತಿಳಿದು ಕಚನನ್ನು ಕೊಂದು ಅಸ್ಥಿಯನ್ನು ಊಟದಲ್ಲಿ ನೀಡಿದ್ದಾರೆ ನನಗೆ. ಅಸಹ್ಯವೆನಿಸಿತು ಶಿಷ್ಯರ ಮೇಲೆ. ದಾರಿ ತೋಚಲಿಲ್ಲ. ದೇವಯಾನಿ ಪ್ರಿಯಕರನ ಜೀವಕ್ಕಾಗಿ ಪರಿತಪಿಸುತ್ತಿದ್ದಳು. ಹಂಬಲಿಸುತ್ತಿದ್ದಳು. ಶುಕ್ರಾಚಾರ್ಯರು ಚಿಂತಿಸಿ ಹೇಳಿದರು "ಕಚ, ನಾನೀಗ ನಿನಗೆ ಮೃತ ಸಂಜೀವಿನಿ ಮಂತ್ರೋಪದೇಶ ನೀಡುತ್ತೇನೆ. ಸಮಯ ಬಂದಾಗ ಉಪಯೋಗಿಸು". "ಅಪ್ಪಣೆ ಗುರುದೇವಾ" ಉತ್ತರಿಸಿದ ಕಚ. ಉಪದೇಶ ನೀಡಿ ಕಚನನ್ನು ಕರೆದರು ಆಚಾರ್ಯರು. ಕಚ ಶುಕ್ರಾಚಾರ್ಯರ ಹೊಟ್ಟೆಸೀಳಿ ಹೊರಬಂದ. ಶುಕ್ರಾಚಾರ್ಯರು ಹೆಣವಾಗಿ ಬಿದ್ದಿದ್ದರು. ಇಡೀ ಅಸುರ ಕುಲ ತಲ್ಲಣವಾಯಿತು. ಪ್ರಿಯಕರನ ಬದುಕಿಗೆ ಸಂಭ್ರಮಿಸಬೇಕೋ ತಂದೆಯ ಸಾವಿಗೆ ದುಃಖಿಸಬೇಕೋ ತಿಳಿಯಲಿಲ್ಲ ದೇವಯಾನಿಗೆ.
ಕಚ ಅವಳನ್ನು ಸಮಾಧಾನಿಸಿ ಮತ್ತೆ ಮೃತಸಂಜೀವಿನಿ ಪಠಿಸಿದ. ಶುಕ್ರಾಚಾರ್ಯರು ಕಣ್ಣು ತೆರೆದರು. ಶಿಷ್ಯನ ಪಾಂಡಿತ್ಯಕ್ಕೆ ತಲೆದೂಗಿದರು. ಕಚನಿಗೆ ಮೃತಸಂಜೀವಿನಿ ವಿದ್ಯೆ ಕಲಿತ ಹೆಮ್ಮೆ ಮೂಡಿತ್ತು. ದೇವಯಾನಿ ಕಚನನ್ನು ಪಡೆದ ಪ್ರೀತಿಯಲ್ಲಿದ್ದಳು. ಗುರುವಿನ ಅನುಮತಿ ಪಡೆದು ಕಚ ದೇವಯಾನಿಯ ಜೊತೆಗೆ ಅಮರಾವತಿಯ ಕಡೆ ಹೆಜ್ಜೆ ಹಾಕಿದಾಗ ಮತ್ತೆ ಸೂರ್ಯಾಸ್ತ ಸಮೀಪಿಸುತ್ತಿತ್ತು..

                                                                                 -ಶಿವಪ್ರಸಾದ ಭಟ್ಟ
                              

No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...