Wednesday, July 15, 2015

ಪೃಥ್ವಿ ಯೋಗ

ಪೂರ್ವ ದೇಶದ ಜನಗಳೊಮ್ಮೆ
ವಲಸೆ ಬಂದರು ಕಾಡಿನೊಳಗೆ
ಮನೆಯ ಕಟ್ಟಲು ಮರವ ಕಡಿದರು
ಕಾಡದಾಯಿತು ಬೆತ್ತಲೆ

ಜನರ ಕ್ರೌರ್ಯದ ಧ್ವನಿಯ ಒಳಗೆ
ಮರಗಳುದುರಿದ ಶಬ್ದ ಮೌನ
ಸೂರ್ಯ ಮೂಡುವ ಹೊತ್ತಿನೊಳಗೇ
ಕಾಣದಾಯಿತು ಕತ್ತಲೆ

ಕಾಲ ಉರುಳಿತು ನಗರ ಬೆಳೆಯಿತು
ವಂಶ ಜನಿಸಿತು ವರ್ಷ ಮರಳಿತು
ಬೀಜ ಬೆಳೆಯಲೂ ಜಾಗವಿಲ್ಲದೇ
ಕಲ್ಲು ಹೊಳೆಯಿತು ಸುತ್ತಲೂ

ದಾರಿ ಕಾಣದ ಹೊಗೆಯ ಮಧ್ಯವೇ
ಜೀವ ಸತ್ತಿತು ಮತ್ತೆ ಹುಟ್ಟಿತು
ಜಲಧಿ ಬತ್ತಿತು ಭೂಮಿ ಕೆಟ್ಟಿತು
ಕೂಗು ಕೇಳಿತು ಎತ್ತಲೂ

ಧ್ವನಿಸಿ ಕೂಗು ಜೀವಜಲಕೆ
ಪ್ರಾಣವಡಗಿತು ಭೂಮಿಯೊಳಗೆ
ಜಲದ ಮೂಲವ ಕೊಂದ ವಿಪ್ಲವ
ಫಲಿಸಿ ಮೊಳಗಿತು ಮನದಲಿ

ಯುವಕನೋರ್ವನು ತಪ್ಪು ಅರಿತನು
ಸಸ್ಯ ಬೆಳೆಸಲು ಮುಂದೆ ಬಂದನು
ಗಿಡವ ನೆಟ್ಟು ನೀರು ಉಣಿಸಿದ
ಪೃಥ್ವಿ ಶ್ಯಾಮಲೆ ಎನಿಸಲು

ತಿದ್ದಿಕೊಂಡರು ತಪ್ಪನೆಲ್ಲಾ
ಸಸ್ಯ ಸರಪಳಿ ಕಟ್ಟಹೊರಟರು
ತಂಪನೆರೆದರು ಭೂಮಿಗೆಲ್ಲಾ
ಹಸಿರು ಮೂಡಿತು ಎಲ್ಲೆಡೆ

ವರ್ಷ ಸುರಿಯಿತು ಮೂಲ ತಡೆಯಿತು
ಇಂಗಿ ನಿಂತಿತು ಪ್ರಾಣಜಲವು
ದಾಹ ತೀರಿತು ಪೂರ್ತಿಯಾಗಿ
ಕೂಡಿ ಕುಣಿದವು ಜನಗಳು

ಪೃಥ್ವಿಯೋಗವು ಹಸಿರ ಹೊರತು
ಸಫಲವಾಗದು ಎಂದೂ ಕೂಡಾ
ಹಸಿರು ಬೆಳೆಯಲಿ ಹಸಿರು ಉಳಿಯಲಿ
ವಾಯುವಾಗಲಿ ಸುಂದರ

ಜೀವ ಜನಿಸಲಿ ಜೀವ ಅಳಿಯಲಿ
ಹಸಿರು ಮಾಸದೇ ಇರಲಿ ಭೂಮಿ
ಸಸ್ಯಶ್ಯಾಮಲೆಯಾಗೇ ಇರಲಿ
ಉಳಿಯಲೆಂದಿಗೂ ಮನುಕುಲ

ಕೈಯ ಕಟ್ಟುವ ಒಂದುಗೂಡುವ
ಪೃಥ್ವಿಯುಳಿಸಲು ಎದೆಯ ಮುಟ್ಟುವ
ಪ್ರಕೃತಿ ಯೋಗಕ್ಷೇಮದೊಂದಿಗೆ
ಬಾಳಲೆಂದಿಗೂ ಸಂಕುಲ..!
ಬಾಳಲೆಂದಿಗೂ ಸೋಕುಲ..!
                   
                                           -ಶಿವಪ್ರಸಾದ ಭಟ್ಟ

Tuesday, March 17, 2015

ಶಬರಿ ಕಾದಿಹಳು....!!

ಶಬರಿ ಕಾದಿಹಳು ಇನ್ನೂ..
ಧೂಳಿನಲ್ಲಿ ದಾಶರಥಿಯ ಹೆಜ್ಜೆ ಗುರುತು ನೋಡುತ
ಬರುವ ಮತ್ತೆ ರಾಮ ಎಂದು ಕಣ್ಣು ಕಿರಿದು ಮಾಡುತ..
ಭದ್ರಬಾಹು ಶಬರಿ ಭಕ್ತಿ ಬಯಸಿ ಮತ್ತೆ ಬರಲಿ ಎಂದು
ಪಾದಕಾಗಿ ನಾದಕಾಗಿ ಶಬರಿ ಇನ್ನೂ ಮಿಡಿಯುತಿಹಳು
ಬರಲೇ ಇಲ್ಲ ರಾಘವ.. ಬರಲೇ ಇಲ್ಲ ರಾಘವ..

ಅಂದೂ ಕಾದಿದ್ದಳು ಶಬರಿ..
ಬಂದ ಅಂದು ರಾಮಭದ್ರ ಸೌಮಿತ್ರಿಯ ಸಹಿತ
ಜಾನಕಿಯನು ಅರಸುತ.. ಕಾಡಲೆಲ್ಲ ಅಲೆಯುತ..
ಕನಸಿನಲ್ಲೂ ಮನಸಿನಲ್ಲೂ ಮೈಥಿಲಿಯನೇ ನೆನೆಯುತ..
ಕಾಣಲಿಲ್ಲ ಶಬರಿ ಅಂದು ಭಕ್ತಿಸ್ಫೂರ್ತಿಯಾಗಿ..
ಮತ್ತೆ ರಾಮನನ್ನೇ ಬಯಸಿ ಕಾಯುತಿಹಳು ಶಬರಿ..
ಬರಲೇ ಇಲ್ಲ ರಾಘವ.. ಅಂದು ಹಾಗೆ ಹೋದವ..

ರಾಮ ರಾಮ ರಾಮ ಎಂದು ಜಪಿಸುತಿಹಳು ಶಬರಿ..
ಬರಲೇ ಬೇಕು ರಾಮಚಂದ್ರ ಶಬರಿ ಭಕ್ತಿ ನೋಡಲು
ವೈದೇಹಿ ಸಹಿತನಾಗಿ ಹಣ್ಣು ಬೇರು ತಿನ್ನಲು..
ಪಾದಕೊರಗಿ ಅಶ್ರು ಸುರಿವ ಭಾವಪೂರ್ಣ ಘಳಿಗೆಗಾಗಿ
ಇಳಿ ಸಂಜೆಯ ದೀಪಕಿನ್ನೂ ತೈಲ ಎರೆಯುತಿಹಳು ಶಬರಿ
ಬರಲೇ ಬೇಕು ರಾಘವ.. ಭಾವಮೂರ್ತಿಯೇ ಅವ..
                           -ಶಿವಪ್ರಸಾದ ಭಟ್ಟ

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...