Tuesday, March 17, 2015

ಶಬರಿ ಕಾದಿಹಳು....!!

ಶಬರಿ ಕಾದಿಹಳು ಇನ್ನೂ..
ಧೂಳಿನಲ್ಲಿ ದಾಶರಥಿಯ ಹೆಜ್ಜೆ ಗುರುತು ನೋಡುತ
ಬರುವ ಮತ್ತೆ ರಾಮ ಎಂದು ಕಣ್ಣು ಕಿರಿದು ಮಾಡುತ..
ಭದ್ರಬಾಹು ಶಬರಿ ಭಕ್ತಿ ಬಯಸಿ ಮತ್ತೆ ಬರಲಿ ಎಂದು
ಪಾದಕಾಗಿ ನಾದಕಾಗಿ ಶಬರಿ ಇನ್ನೂ ಮಿಡಿಯುತಿಹಳು
ಬರಲೇ ಇಲ್ಲ ರಾಘವ.. ಬರಲೇ ಇಲ್ಲ ರಾಘವ..

ಅಂದೂ ಕಾದಿದ್ದಳು ಶಬರಿ..
ಬಂದ ಅಂದು ರಾಮಭದ್ರ ಸೌಮಿತ್ರಿಯ ಸಹಿತ
ಜಾನಕಿಯನು ಅರಸುತ.. ಕಾಡಲೆಲ್ಲ ಅಲೆಯುತ..
ಕನಸಿನಲ್ಲೂ ಮನಸಿನಲ್ಲೂ ಮೈಥಿಲಿಯನೇ ನೆನೆಯುತ..
ಕಾಣಲಿಲ್ಲ ಶಬರಿ ಅಂದು ಭಕ್ತಿಸ್ಫೂರ್ತಿಯಾಗಿ..
ಮತ್ತೆ ರಾಮನನ್ನೇ ಬಯಸಿ ಕಾಯುತಿಹಳು ಶಬರಿ..
ಬರಲೇ ಇಲ್ಲ ರಾಘವ.. ಅಂದು ಹಾಗೆ ಹೋದವ..

ರಾಮ ರಾಮ ರಾಮ ಎಂದು ಜಪಿಸುತಿಹಳು ಶಬರಿ..
ಬರಲೇ ಬೇಕು ರಾಮಚಂದ್ರ ಶಬರಿ ಭಕ್ತಿ ನೋಡಲು
ವೈದೇಹಿ ಸಹಿತನಾಗಿ ಹಣ್ಣು ಬೇರು ತಿನ್ನಲು..
ಪಾದಕೊರಗಿ ಅಶ್ರು ಸುರಿವ ಭಾವಪೂರ್ಣ ಘಳಿಗೆಗಾಗಿ
ಇಳಿ ಸಂಜೆಯ ದೀಪಕಿನ್ನೂ ತೈಲ ಎರೆಯುತಿಹಳು ಶಬರಿ
ಬರಲೇ ಬೇಕು ರಾಘವ.. ಭಾವಮೂರ್ತಿಯೇ ಅವ..
                           -ಶಿವಪ್ರಸಾದ ಭಟ್ಟ

No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...