Tuesday, January 26, 2016

ಸ್ವಯಂವರ

"ಇನ್ನೆರಡು ದಿನದಲ್ಲಿ ಸ್ವಯಂವರವಂತೆ ಸಖೀ.."
ಸಖಿಯ ಮಾತು ಕೇಳಿ ಪಾಂಚಾಲಿಗೆ ಸಿಡಿಲು ಬಡಿದಂತಾಯಿತು. ಇನ್ನೆರಡು ದಿನದಲ್ಲಿ ಸ್ವಯಂವರವೆಂದರೇನು ಹುಡುಗಾಟದ ಮಾತೇ? ತಂದೆ ದ್ರುಪದ ಸಾರ್ವಭೌಮ ನನ್ನನ್ನು ಕೇಳದೇ ಹೇಗೆ ನಿರ್ಧರಿಸಿಯಾರು? ನನ್ನ ಮನಸಿನ ಭಾವನೆಗಳಿಗೆ ಬೆಲೆ ಕೊಡದೇ, ಕಾಮನೆಗಳನ್ನು ಗೌರವಿಸದೇ, ಯಾವನೋ ಕ್ಷತ್ರಿಯ ಕುಮಾರನಿಗೆ ಕೊಟ್ಟುಬಿಡುವ ಸಲುವಾಗಿ ನನ್ನನ್ನು ಹೆತ್ತರೇನು? ಪ್ರಶ್ನೆಗಳ ಪ್ರವಾಹ ಹರಿಯಿತು ಪಾಂಚಾಲಿಯ ಮನದಲ್ಲಿ. ದ್ರೋಣರ ದ್ವೇಷದ ಕಿಚ್ಚನ್ನು ಆರಿಸಬಂದ ಫಲ್ಗುಣನನ್ನು ವರಿಸಬೇಕೆಂದು ತಂದೆ ನನ್ನನ್ನು ಪಡೆದರಂತೆ. ಅರಗಿನ ಮನೆಯಲ್ಲಿ ಕುಂತೀಸಹಿತ ಪಾಂಡುತನಯರು ಭಸ್ಮೀಭೂತರಾಗಿರುವರೆಂಬ ಸುದ್ದಿಯೆಲ್ಲೆಡೆಯಿರುವಾಗ, ಯಾವನೋ ಪಂಥ ಗೆಲ್ಲುವ ಸರದಾರನಿಗೆ ನನ್ನನ್ನು ವರಿಸುವ ಗತಿ ಬಂದಿದ್ದರೆ, ಜನ್ಮಕ್ಕೇನು ಸಾರ್ಥಕ್ಯ? ಎಂಬಿತ್ಯಾದಿ ಬೇಸರದ ಮಾತುಗಳನ್ನು ಸಾರ್ವಭೌಮನ ಮುಂದೆ ಕೇಳಿಬಿಡಬೇಕೆನ್ನುವಷ್ಟರಲ್ಲೇ ಭಟರ ಉದ್ಘೋಷ ದ್ರುಪದನ ಆಗಮನದ ಸುಳಿವನ್ನು ಪಾಂಚಾಲಿಗೆ ನೀಡಿತು.

ಎಂದಿನ ರಾಜ ಗಾಂಭೀರ್ಯದಲ್ಲಿ ದ್ರುಪದನ ಆಗಮನವಾಯಿತು ಅಂತಃಪುರಕ್ಕೆ. ಮಗಳೆದುರು ನಿಂತು ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲಾ ತುಂಬಿರುತ್ತಿದ್ದ ದ್ರುಪದನ ಕಂಗಳ ಕಾಂತಿ ಮಂದವಾಗಿತ್ತು. ಪಾಂಚಾಲಿ ಬಂದು ನಮಸ್ಕರಿಸಿದಳು.
"ಮಗೂ.. ಇನ್ನೆರಡು ದಿನಗಳಲ್ಲಿ ನಿನ್ನ ಸ್ವಯಂವರ ನಿಶ್ಚಯಿಸಿದ್ದೇನೆ. ನೋಡ ನೋಡುತ್ತಿದ್ದಂತೆ ನಿನಗೆ ಹದಿನೆಂಟು ತುಂಬಿದೆ. ಆಲಸ್ಯ ಸರಿಯಲ್ಲ. ಸಿದ್ಧಳಾಗು!" ಎಂದ ದ್ರುಪದ.
ಪಾಂಚಾಲಿ ಒಂದು ಕ್ಷಣ ಸ್ತಬ್ಧಳಾದಳು.
"ಬುದ್ಧಿ ಬಂದಾಗಿನಿಂದ ಫಲ್ಗುಣನೇ ನಿನ್ನ ಸಖನೆಂದು ಸಾರಿ ಸಾರಿ ಹೇಳಿ, ಆತನ ಅವಸಾನವಾಯಿತೆಂದೊಡೆ ಇನ್ನಾರಿಗೋ ಕನ್ಯಾದಾನ ಮಾಡಲು ಮನಸ್ಸಾದರೂ ಹೇಗಯಿತಪ್ಪಾ?" ಎಂದಳು ಪಾಂಚಾಲಿ.

"ಅರಗಿನ ಮನೆಯಲ್ಲಿ ಸುಟ್ಟು ಸಾಯಲು ಕುಂತೀಸುತರು ಕೈಲಾಗದವರಲ್ಲ. ಅಪ್ರತಿಮ ವೀರರು. ಕುರು ವಂಶ ಸಂಜಾತರು. ಅವರು ಅಳಿದಿರುವರೆಂದು ನಾನು ನಂಬುವುದಿಲ್ಲ. ನಿನ್ನ ಸ್ವಯಂವರವೆನು ಸಾಮಾನ್ಯದ್ದೇ? ತಿರುಗುವ ಮತ್ಸ್ಯ ಯಂತ್ರವನ್ನು ಛೇದಿಸಬಲ್ಲ ವೀರಾಗ್ರಣಿ ಮಾತ್ರ ನಿನ್ನ ಕೈಯ್ಯಲ್ಲಿನ ವಿಜಯ ಮಾಲೆಯನ್ನು ತೊಡಬಲ್ಲ. ಅದು ಪ್ರಪಂಚದಲ್ಲಿ ಫಲ್ಗುಣನಿಂದ ಮಾತ್ರ ಸಾಧ್ಯ. ಚಿಂತಿಸದಿರು!" ಎಂದವನೇ ದ್ರುಪದ ಅಂತಃಪುರದಿಂದ ಹೊರನಡೆದುಬಿಟ್ಟ. ಇದಕ್ಕಿಂತ ಹೆಚ್ಚಿನದ್ದನ್ನು ತಿಳಿಹೇಳುವ ತಾಳ್ಮೆಯಾಗಲೀ,  ವ್ಯವಧಾನವಾಗಲೀ ಅವನಲ್ಲಿರಲಿಲ್ಲ.

ಹಾಗಾದರೆ ಪಾಂಡವರು ಅರಗಿನ ಮನೆಯಲ್ಲಿ ಸತ್ತಿದ್ದು ಸುಳ್ಳೇ? ಅಗ್ನಿಜ್ವಾಲೆಯ ಬಲೆಯಿಂದ ಫಲ್ಗುಣ ಪಾರಾಗಿರಬಹುದೇ? ಪಾರಾಗಿದ್ದರೆ ಎಲ್ಲಿರಬಹುದು? ನನ್ನ ಸ್ವಯಂವರದ ಸುದ್ದಿ ಅವನಲ್ಲಿಗೂ ತಲುಪಿರಬಹುದೇ? ತಲುಪಿದ್ದೇ ಆದಲ್ಲಿ ಪಾಂಚಾಲನಗರಕ್ಕೆ ಬಂದು ಮತ್ಸ್ಯ ಯಂತ್ರವನ್ನು ಬೇಧಿಸುವ ಸಾಹಸ ಮಾಡಬಹುದೇ? ಅವನೊಡನೆ ಯುಧಿಷ್ಠಿರ, ಭೀಮಸೇನರೂ ಬರಬಹುದೇ? ಕುಂತೀಮಾತೆ ಹೇಗಿರಬಹುದು? ಪಾರ್ಥನನ್ನು ಕಂಡು ಕ್ಷತ್ರಿಯ ಕುಮಾರರ ಸ್ಥಿತಿ ಹೇಗಾಗಬಹುದು? ತಂದೆ ಹಸ್ತಿನಾವತಿಗೂ ಆಮಂತ್ರಣ ನೀಡಿರುವರಂತೆ, ಸುಯೋಧನ ಬಂದರೆ ಆತ ಹೇಗೆ ಪ್ರತಿಕ್ರಿಯಿಸಬಹುದು? ಎಂಬಿತ್ಯಾದಿ ಪ್ರಶ್ನೆಗಳು ಪಾಂಚಾಲಿಯ ಮನದ ತುಮುಲವನ್ನು ಹೆಚ್ಚಿಸಿದ್ದವು. ಪಾಂಚಾಲಿ ಚಿಂತೆಯಲ್ಲಿಯೇ ಮೌನಕ್ಕೆ ಶರಣಾದಳು.

ಕಳೆದೆರಡು ದಿನಗಳಿಂದ ಪಾಂಚಾಲಿಯ ಮನಸ್ಸನ್ನು ಕದಡಿದ್ದ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ, ಸ್ವಯಂವರದ ದಿನ ಬಂದೇ ಬಿಟ್ಟಿತು. ಪಾಂಚಾಲನಗರಿ ನವ ವಧುವಿಂತೆ ಸಿಂಗಾರಗೊಂಡಿತ್ತು. ಅರಮನೆಯ ತುಂಬೆಲ್ಲಾ ಹಬ್ಬದ ವಾತಾವರಣ. ಪಾಂಚಾಲಿ ಅರಿಶಿಣ ಸ್ನಾನ ಮಾಡಿ ಅಲಂಕೃತಳಾದಳು. ಯುವರಾಣಿಯ ಸ್ವಯಂವರಕ್ಕೆ ಪಾಂಚಾಲನಗರಿ ಸಿದ್ಧಗೊಂಡಿತ್ತು. ವಿಶಾಲ ಬಯಲಿನ ಸ್ವಯಂವರ ಮಂಟಪಕ್ಕೆ ಪಾಂಚಾಲಿ ಶ್ವೇತಾಶ್ವ ರಥದಲ್ಲಿ ಬಂದಿಳಿದಳು. ವಿಶಾಲ ಬಯಲು ಪ್ರಜಾ ಜನರಿಂದ, ಕ್ಷತ್ರಿಯ ಬ್ರಾಹ್ಮಣಾದಿಗಳಿಂದ ತುಂಬಿತ್ತು. ಸಂಪ್ರದಾಯದಂತೆ ಆಗ್ನೇಯ ದಿಕ್ಕಿನಲ್ಲಿ ಮಂಟಪ ಪಾಂಚಾಲಿಗಾಗಿ ಕಾದು ನಿಂತಿತ್ತು. ವಾಮಭಾಗದಲ್ಲಿ ವಿಪ್ರರಿಗಾಗಿ ಸ್ಥಾನ ಮೀಸಲಿದ್ದರೆ ದಕ್ಷಿಣದಲ್ಲಿ ಕ್ಷತ್ರಿಯರು ಆಸೀನರಾಗಿದ್ದರು. ಕ್ಷತ್ರಿಯರ ಸಾಲಿನಲ್ಲಿ ಗಾಂಧಾರ, ಕನೋಜ, ಮಧುರೆ, ದ್ವಾರಕೆ, ಹಸ್ತಿನಾವತಿ, ಸಾಕೇತ ಇವೇ ಮೊದಲಾದ ರಾಜ್ಯಗಳ ಮಹಾರಾಜರು ಆಸೀನರಾಗಿದ್ದರು. ರಾಜರ ಸಾಲಿನಲ್ಲಿ ಕುಳಿತಿದ್ದ ಬಲಭದ್ರ - ವಾಸುದೇವರನ್ನು ಕಂಡು ಪಾಂಚಾಲಿಗೆ ಆನಂದವಾಯಿತು. ದ್ವಿಜರ ಸಾಲಿನಲ್ಲಿ ಕೃಪ, ಅಶ್ವಥ್ಥಾಮ, ವಿದುರಾದಿ ವಿಪ್ರರು ಆಸೀನರಾಗಿದ್ದರು. ಪಾಂಚಾಲಿಯ ಕಂಗಳು ಇವರೆಲ್ಲರನ್ನೂ ಬಿಟ್ಟೂ ಫಲ್ಗುಣನನ್ನು ಹುಡುಕುತ್ತಿತ್ತು.

ಕುಲಪುರೋಹಿತರು ವೇದಿಕೆಯ ಮೇಲೆ ಬಂದು ವೇದಘೋಷ ಮಾಡಿದರು. ದ್ರುಪದ ಸ್ವಯಂವರದ ನಿಯಮಗಳ ಘೋಷಣೆ ಮಾಡಿದ. ಪಾಂಚಾಲಿ ಮತ್ಸ್ಯಯಂತ್ರದತ್ತ ನೋಡಿದಳು. ಮೇಲೆ ತಿರುಗುವ ಚಕ್ರ. ಚಕ್ರಕ್ಕೆ ಮೀನಿನ ಗೊಂಬೆಯನ್ನು ಕಟ್ಟಲಾಗಿತ್ತು. ಕೆಳಗಡೆ ಇರುವ ಎಣ್ಣೆಯಲ್ಲಿ ಮೀನಿನ ಬಿಂಬ ನೋಡಿ ಕಣ್ಣಿಗೆ ಬಾಣ ಹೂಡುವ ಧೀರನಿಗೆ ಪಾಂಚಾಲಿ ಸಖಿಯಾಗುತ್ತಾಳೆ. ದ್ರುಪದಪುತ್ರಿಯ ಕೈ ಹಿಡಿಯುವವ ಎಂಥ ಶೂರನಾಗಿರಬಹುದು. ಖಂಡಿತಾ ಇದು ಫಲ್ಗುಣನಿಂದ ಮಾತ್ರ ಸಾಧ್ಯ. ಪಾಂಚಾಲಿಯ ಮನಸು ಬೀಗಿತು.

ಶಂಖನಾದದೊಂದಿಗೆ ಸ್ಪರ್ಧೆ ಪ್ರಾರಂಭವಾಯಿತು. ರಾಜಕುಮಾರರು, ಸಾರ್ವಭೌಮರು, ಸಾಮಂತರು ಒಬ್ಬೊಬ್ಬರಾಗಿ ಬಂದು ಮತ್ಸ್ಯಯಂತ್ರ ಬೇಧಿಸಹೊರಟರು. ಪ್ರತಿಯೋರ್ವ ಕ್ಷತ್ರಿಯ ಬಂದಾಗಲೂ ಪಾಂಚಾಲಿ ಇವನು ಅರ್ಜುನನಿರಬಹುದೇ ಎಂದು ನೋಡತೊಡಗಿದಳು. ಎಲ್ಲರೂ ಸೋಲತೊಡಗಿದಾಗ ಪಾಂಚಾಲಿಯ ಆಸೆಗಳು ಸಾಯತೊಡಗಿದವು. ಶಿಶುಪಾಲನಿಗೆ ಗುರಿಯಿಡಲಾಗಲಿಲ್ಲ. ದಂತವಕ್ರನೂ ಸೋತ. ಜರಾಸಂಧ, ಸುಯೋಧನರು ಕೂದಲೆಳೆಯ ಅಂತರದಲ್ಲಿ ಸೋತರು. ಪಂಥಗೆಲ್ಲಬಲ್ಲ ವೀರ ಯಾರೂ ಇಲ್ಲಿಲ್ಲವೆಂದು ಜನ ಗುಸುಗುಡತೊಡಗಿದರು.

ಇದ್ದಕ್ಕಿದ್ದಂತೆ ಕ್ಷತ್ರಿಯರ ಸಾಲಿನಿಂದ ಓರ್ವ ಸುಂದರ ತರುಣ ಮಿಂಚಿನಂತೆ ಎದ್ದು ಬಂದ. ಕಂಗಳಲ್ಲಿ ಕಾಂತಿಯಿತ್ತು, ಗೆಲ್ಲುವ ಛಲವಿತ್ತು. ಹೊಳೆಯುವ ಕಣ್ಣು, ನೀಳದೋಳುಗಳು, ಮೈಕಟ್ಟು, ಗಾಂಭೀರ್ಯ ಫಲ್ಗುಣನನ್ನೇ ಹೋಲುತ್ತಿತ್ತು. ಇವನೇ ಪಾರ್ಥನಿರಬಹುದೇ? ಹಾಗಾದರೆ ಕೌರವರ ಜೊತೆಯಲ್ಲೇನು ಮಾಡುತ್ತಿದ್ದ? ಎಂದು ಯೋಚಿಸತೊಡಗಿದಳು. ನೋಡುತ್ತಿದ್ದಂತೆ ಕ್ಷತ್ರಿಯ ಚಿರತೆಯಂತೆ ಯಂತ್ರದತ್ತ ಮುನ್ನುಗ್ಗಿದ, ಮಂಡಿಯೂರಿ ಕುಳಿತ, ಬಿಂಬದತ್ತಲೇ ದೃಷ್ಟಿನೆಟ್ಟ. ಬಿಲ್ಲು ಹೆದೆಯೇರಿಸಿ ಗುರಿಯಿಟ್ಟ..

"ಸೂತಪುತ್ರ ಕ್ಷತ್ರಿಯ ಕುಮಾರಿಯನ್ನು ವರಿಸುವುದು ಶಾಸ್ತ್ರ ಸಮ್ಮತವಲ್ಲ.."
ಜನಸ್ತೋಮದಿಂದ ಯಾರೋ ಕೂಗಿದರು. ಇಡೀ ಸಭೆಯ ಚಿತ್ತ ಕ್ಷತ್ರಿಯನತ್ತ ತಿರುಗಿತು. ಆತ ತಲೆ ತಗ್ಗಿಸಿದ. ಪಾಂಚಾಲಿ ಸಖಿಯತ್ತ ಕಣ್ಣು ಹೊರಳಿಸಿದಳು.

"ಕರ್ಣನಂತೆ.. ರಾಧೇಯನಂತೆ.. ಹಸ್ತಿನಾಪುರಿಯ ಅಂಗರಾಜ್ಯಾಧಿಪನಂತೆ.. ಸುಯೋಧನನ ಪರಮಾಪ್ತನಂತೆ.. ಫಲ್ಗುಣನಿಗಂತೂ ಪರಮ ವೈರಿಯಂತೆ.." ಕಣ್ಸನ್ನೆ ಅರಿತವಳಂತೆ ನುಡಿದಳು ಸಖಿ.
ಅಂದರೆ ಇಷ್ಟು ಹೊತ್ತಿನ ತನಕ ತನ್ನ ಗಾಂಭೀರ್ಯದಿಂದ ನನ್ನ ಮನಸ್ಸನ್ನು ಗೆದ್ದವ ಭಾರ್ಗವ ರಾಮನ ಶಿಷ್ಯ.. ಕರ್ಣ.. ಪಾಂಚಾಲಿ ವಿಚಲಿತಳಾದಳು. ಅತ್ತ ರಾಧೇಯ ತಲೆತಗ್ಗಿಸಿ ಪಂಥದಿಂದ ಹಿಂದೆಸರಿದುಬಿಟ್ಟ. ಮಿತ್ರನನ್ನು ಅವಮಾನಿಸಿದ್ದಕ್ಕೆ ಕೋಪದಿOದ ಸುಯೋಧನ ಕುದಿಯುತ್ತಿದ್ದಂತೆ ಕಂಡಿತು ಪಾಂಚಾಲಿಗೆ. ಫಲ್ಗುಣನಿಲ್ಲ. ಭಾರ್ಗವರಾಮನ ಶಿಷ್ಯನೂ ಸೋತ. ಇನ್ನಾರಿಂದ ಸಾಧ್ಯ ಯಂತ್ರಬೇಧನೆ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿತು.

"ಕ್ಷತ್ರಿಯರಿಲ್ಲದಿದ್ದರೆ ಬ್ರಾಹ್ಮಣರು ಪ್ರಯತ್ನಿಸಬಹುದೇ.?" ಇದ್ದಕ್ಕಿದ್ದಂತೆ ವಿಪ್ರಸಮೂಹದ ಮಧ್ಯದಿಂದ ಬಂದ ಧ್ವನಿ ಎಲ್ಲರನ್ನೂ ತನ್ನತ್ತ ಸೆಳೆಯಿತು. ಬ್ರಾಹ್ಮಣ ಸಮೂಹದಿಂದ ಒಬ್ಬ ತರುಣ ಎದ್ದು ನಿಂತ. ಕರ್ಣನನ್ನೇ ಹೋಲುತ್ತಿದ್ದ. ದೃಷ್ಟದ್ಯುಮ್ನ ಮುಂದೆಬಂದ. "ಖಂಡಿತವಾಗಿ. ಚತುರ್ವರ್ಣದಲ್ಲಿ ಯಾರಾದರೂ ಪ್ರಯತ್ನಿಸಬಹುದು." ಎಂದ.
ವಿಪ್ರ ಮುಂದೆ ಬಂದು ಎಲ್ಲರಿಗೂ ನಮಸ್ಕರಿಸಿದ. ಪಾಂಚಾಲಿಯ ಎದೆಬಡಿತ ಹೆಚ್ಚಾಯಿತು. ನೋಡುತ್ತಿದ್ದಂತೆ ಆತ ಬಿಂಬದತ್ತ ನೋಡಿ ಹೆದೆಯೇರಿಸಿ ಗುರಿಯಿಟ್ಟು ಮೀನಿನ ಕಣ್ಣಿಗೆ ಬಾಣ ನೆಟ್ಟುಬಿಟ್ಟ. ಕಿಕ್ಕಿರಿದು ತುಂಬಿದ್ದ ಜನಸ್ತೋಮದಿಂದ ಜಯಘೋಷವಾಯಿತು. ದ್ರುಪದ, ದೃಷ್ಟದ್ಯುಮ್ನರ ಮುಖದಲ್ಲಿ ಮಂದಹಾಸ ಮೂಡಿತು. ಪಾಂಚಾಲಿ ಮೂಕವಿಸ್ಮಿತಳಾದಳು.

ಕ್ಷತ್ರಿಯರ ಸ್ವಯಂವರದಲ್ಲಿ ಬ್ರಾಹ್ಮಣ ಗೆಲ್ಲುವುದೆಂದರೇನು.. ಕ್ಷತ್ರಿಯಕುಲವೆಲ್ಲಾ ಕೋಪದಿಂದ ಕುದಿಯಿತು. ರಾಜರು ವಿಪ್ರನ ಮೇಲೆರಗಲು ನಿಂತರು. ಇದ್ದಕ್ಕಿದ್ದಂತೆ ಬಲಿಷ್ಠ ಮೈಕಟ್ಟಿನ ಇನ್ನೋರ್ವ ಬ್ರಾಹ್ಮಣ ಮುಂದೆಬಂದು ನಿಂತ. ಕ್ಷಣ ಮಾತ್ರದಲ್ಲಿ ಮೇಲೆ ಬಿದ್ದ ರಾಜರುಗಳನ್ನೆಲ್ಲಾ ಹಿಮ್ಮೆಟ್ಟಿಸಿದ. ಮುಷ್ಠಿಯೇಟು ತಿಂದ ಸುಯೋಧನ ಕೈಕೈ ಹಿಸುಕಿಕೊಂಡ. ಯಾವಾಗಲೂ ಮಂತ್ರ - ಪೂಜೆ - ಶಾಸ್ತ್ರಗಳೆಂದು ತಮ್ಮಷ್ಟಕ್ಕೆ ತಾವಿರುವ ಬ್ರಾಹ್ಮಣರ ಪೌರುಷ ಕಂಡು ಇವರು ವಿಪ್ರರಲ್ಲವೇನೋ ಎಂದೆನಿಸಿತು ಪಾಂಚಾಲಿಗೆ. ಅಷ್ಟರಲ್ಲಾಗಲೇ ದೃಷ್ಟದ್ಯುಮ್ನ ಮಧ್ಯ ಪ್ರವೇಶಿಸಿ ವಾತವರಣ ತಿಳಿಗೊಳಿಸಿದ. ಎಲ್ಲವೂ ಸರಿಯಾಯಿತು. ಪರಿಸ್ಥಿತಿ ಶಾಂತವಾಯಿತು. ಮಾಲೆಹಿಡಿದು ಬಂದು ಪಾಂಚಾಲಿ ವಿಪ್ರನಿಗೆ ತೊಡಿಸಿದಳು. ಪ್ರಜೆಗಳೆಲ್ಲಾ ಉದ್ಘೋಷ ಮಾಡಿದರು. ಮಂಗಳವಾದ್ಯಗಳು ಮೊಳಗಿದವುಪುಷ್ಪವೃಷ್ಟಿಯಾಯಿತು.


ಅಂತೂ ಪಾಂಚಾಲಿ ವೀರ ಬ್ರಾಹ್ಮಣನ ಕೈ ಹಿಡಿದಳು. ಪಾಂಚಾಲಿಯ ಬೆರಳುಗಳು ಆತನ ಬೆರಳುಗಳ ಮಧ್ಯೆ ಬಿಗಿಯಾಗಿ ಬಂಧಿತವಾಗಿದ್ದವು. ಪಾಂಚಾಲಿಯ ಮನಸ್ಸು ಸಂಭ್ರಮಿಸುತ್ತಿತ್ತು.. ಬೀಗುತ್ತಿತ್ತು. ಆದರೆ ಹೃದಯದ ಯಾವುದೋ ಮೂಲೆಯಲ್ಲಿ ರಾಧೇಯನಿದ್ದ.. ನೆನಪಾಗುತ್ತಿದ್ದ..!
               
                                                                                          -ಶಿವಪ್ರಸಾದ ಭಟ್ಟ


1 comment:

  1. ಪಾಂಚಾಲಿಯ ಸ್ವಯಂವರದ ಕಥನದ ನಿರೂಪಣೆ ಬಹಳ ಆಕರ್ಷಣೀಯವಾಗಿದೆ. 👌

    ReplyDelete

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...