ಭರತ ಬಂದು ಕೂಗಿ ಕರೆಯುವಷ್ಟರಲ್ಲಿ ಸೂರ್ಯ ತನ್ನ ದೈನಂದಿನ ಕೆಲಸ ಮುಗಿಸಿ ಮನೆಗೆ ತೆರಳಿದ್ದ. ಅದ್ಯಾವ ಪರಿಯಲ್ಲಿ ನಿದ್ರೆ ಆವರಿಸಿತ್ತೋ ನನಗೇ ತಿಳಿದಿರಲಿಲ್ಲ. ಭರತ 'ಅಮ್ಮಾ' ಎಂದು ಕರೆದ ಒಂದೇ ಕೂಗು, ಎಲ್ಲಾ ನಿದ್ದೆಯ ಮಂಪರನ್ನು ಹರಿದು, ನನ್ನನ್ನು ಬಡಿದೆಬ್ಬಿಸಿತ್ತು. ಗುರುಪುತ್ರರೊಂದಿಗೆ ಆಟವಾಡಿ ಬಂದ ಭರತನ ಮೈಯೆಲ್ಲಾ ತೊಳೆಸಿ, ಮಡಿ ಬಟ್ಟೆ ಹಾಕಿಸಿ, ಬಾಯಿಪಾಠ ಹೇಳಿಸುವಷ್ಟರಲ್ಲಿ ಸುಸ್ತಾಗಿತ್ತು. ನಾಲ್ಕು ವರ್ಷದ ತುಂಟ ಮಗುವನ್ನು ಸಂಭಾಳಿಸುವ ಕೆಲಸ ಪ್ರತಿ ತಾಯಿಗೂ ಕಷ್ಟಸಾಧ್ಯ ಎಂದು ಪ್ರತಿ ಬಾರಿಯೂ ನನಗೆ ನಾನೇ ಸಮಾಧಾನಮಾಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಎದ್ದು ನನ್ನ ಸಖಿಯೊಡನೆ ಇಡೀ ಕಣ್ವಾಶ್ರಮವನ್ನೆಲ್ಲಾ ಸುತ್ತುವುದು, ಹೊತ್ತೇರುವ ಸಮಯದಲ್ಲಿ ಉದ್ಯಾನದಲ್ಲಿ ಕೂತು ಹೂವಿನ ಎಸಳುಗಳನ್ನು ಕೀಳುವುದು, ಮಧ್ಯಾಹ್ನ ಊಟ ಮಾಡಿ ಕುಂಭಕರ್ಣನಂತೆ ನಿದ್ರಿಸುವುದು, ಮತ್ತೆ ಎದ್ದು ಸೂರ್ಯ ಮುಳುಗುವ ತನಕ ನಿದ್ದೆ ಮಾಡುವುದು, ಇವಿಷ್ಟು ಭರತನ ಪ್ರತಿನಿತ್ಯದ ವೇಳಾಪಟ್ಟಿಯಾಗಿಬಿಟ್ಟಿತ್ತು. ನನಗೂ ಇದೆಲ್ಲಾ ಅಭ್ಯಾಸವಾಗಿತ್ತು. ಆದರೆ ಇಂದೇಕೋ ಇದ್ಯಾವುದೂ ಮಾಮೂಲಿಯಾಗಿ ಭಾಸವಾಗಿರಲಿಲ್ಲ. ಎಂದೂ ಮುಸ್ಸಂಜೆಯಲ್ಲಿ ನಿದ್ರೆಗೆ ಜಾರದವಳು ಬಾಹ್ಯ ಪ್ರಪಂಚದ ಪರಿವೆಯೇ ಇಲ್ಲದಂತೆ ನಿದ್ರೆಗೆ ಜಾರಿದ್ದೆ. ಭರತನಿಗೆ ಊಟ ಮಾಡಿಸುವಾಗಲೂ ಅವನ ಬೇಡಗಳ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಬಲವಂತವಾಗಿ ಬಾಯಿಗೆತುರುಕಿದ್ದೆ. ಭರತ ತನ್ನ ಪಾಡಿಗೆ ತಾನು ನಿದ್ರಿಸಿದ್ದ. ನಾನು ಚಾಪೆಯಮೇಲೆ ನಿದ್ದೆಬಾರದೇ ಹೊರಳಾಡುತ್ತಾ ಮಲಗಿದ್ದೆ. ಹಳೆಯ ಘಟನೆಗಳೆಲ್ಲವೂ ಚಿತ್ರಗಳಾಗಿ ಮನಸಿನ ಪರದೆಯ ಮೇಲೆ ಮೂಡಿ ಮರೆಯಾಗತೊಡಗಿದವು.
ನನಗಿನ್ನೂ ನೆನಪಿದೆ, ಕಣ್ವ ಮಹರ್ಷಿಗಳು ಆಶ್ರಮದಲ್ಲಿಲ್ಲದ ದಿನವದು. ಆಶ್ರಮದ ಜವಾಬ್ದಾರಿಯೆಲ್ಲಾ ನನ್ನ ಮೇಲೆಯೇ ಇತ್ತು. ಮೊದಲಿನಿಂದಲೂ ಹಾಗೆ. ಕಣ್ವ ಮಹಾಮುನಿ ಸಮಾಜ ಕಲ್ಯಾಣಾರ್ಥ ಯಾಗ, ಪೂಜೆಗಳನ್ನು ನೆರವೆರಿಸುವುದಕ್ಕಾಗಿ ಲೋಕಸಂಚಾರ ಮಾಡುತ್ತಲೇ ಇರುವವರು. ತನ್ನ ಸ್ವಹಿತವನ್ನು ಬಿಟ್ಟು ಎಲ್ಲರ ಉದ್ಧಾರಕ್ಕಾಗಿ ಪೂಜಿಸುವ ಮಹಾಬ್ರಾಹ್ಮಣ. ಅಷ್ಟೇ ಕೋಪಿಷ್ಟ ಕೂಡಾ. ತಾನಿಲ್ಲದ ಸಂದರ್ಭದಲ್ಲಿ ಆಶ್ರಮವನ್ನು ಶುಚಿಯಾಗಿ, ಶುಭ್ರವಾಗಿ ಇಟ್ಟುಕೊಳ್ಳದಿದ್ದರೆ, ಮರಳಿದ ಮರುಕ್ಷಣವೇ ಬೈಗುಳಗಳ ಸುರಿಮಳೆ ಎಲ್ಲರ ಮೇಲೂ ಪ್ರಾರಂಭವಾಗುತ್ತಿತ್ತು. ಪ್ರತಿಬಾರಿ ಕಣ್ವರು ಹೊರಹೋದಾಗಲೆಲ್ಲಾ ಆಶ್ರಮದ ಕೆಲಸಗಳು ಪ್ರೀತಿಯ ಮಗಳಾದ ನನ್ನ ಮೇಲೆ ಬಿದ್ದಿರುತ್ತಿತ್ತು. ಕೆಲಸದವರಿಗೆ ಸೂಕ್ತ ನಿರ್ದೇಶನ ಮಾಡಿ, ಕೆಲಸ ಮಾಡಿಸುವಷ್ಟರಲ್ಲಿ ನನ್ನ ಜಂಘಾಬಲವೇ ಉಡುಗಿಹೋಗುತ್ತಿತ್ತು.
ಅಂದು ಬೆಳಿಗ್ಗೆ ನಿತ್ಯಕರ್ಮವೆಲ್ಲಾ ಮುಗಿಸಿ ಉದ್ಯಾನದಲ್ಲಿ ಹೂಗಳನ್ನು ತೆಗೆಯುವ ಕೆಲಸ ನನ್ನದಾಗಿತ್ತು. ಕಣ್ವಮುನಿಗಳು ಆಶ್ರಮದಲ್ಲಿಲ್ಲದ ಕಾರಣ ಅವರ ಶಿಷ್ಯರು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಉದ್ಯಾನದಲ್ಲಿ ನಿಂತಿದ್ದವಳಿಗೆ ಕುದುರೆಗಳ ಖುರಪುಟದ ಸದ್ದು ಕೇಳತೊಡಗಿತು. ಯಾರೋ ಕ್ಷತ್ರಿಯರು ಮುನಿಗಳನ್ನು ಭೇಟಿಯಾಗಬಂದಿದ್ದಾರೆ ಎಂದು ನನ್ನ ಮನಸಿನಲ್ಲೇ ನೆನೆದು ಸುಮ್ಮನಾದೆ. ಸಮಯ ಕಳೆಯಿತು. ಕುದುರೆಯೊಂದು ಬರುವ ಸದ್ದು ಆಶ್ರಮದ ದ್ವಾರದ ಬಳಿ ಕೇಳತೊಡಗಿತು. ಕಣ್ವರ ಆಶ್ರಮ ತೀರಾ ದೊಡ್ಡದೇನಲ್ಲ. ಭರದ್ವಾಜ, ಅಗಸ್ತ್ಯರ ಆಶ್ರಮಗಳು ನಮ್ಮ ಆಶ್ರಮಕ್ಕೆ ಹೋಲಿಸಿದರೆ ತೀರ ದೊಡ್ಡವು. ಅಲ್ಲಿ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ನಮ್ಮಲ್ಲಿಗೆ ಹೋಲಿಸಿದರೆ ಅತೀ ಹೆಚ್ಚು. ಆಶ್ರಮದ ಮುಖ್ಯದ್ವಾರದ ಬಳಿ ಆಗುವ ಸದ್ದೂ ನಮಗೆ ಕೇಳಿಸುತ್ತಿತ್ತು. ಮೊನ್ನೆ ತಾನೆ ಉಪನಯನವಾಗಿ ಮಹರ್ಷಿಗಳ ಬಳಿ ವೇದ ಸಂಸ್ಕಾರಕ್ಕೆಂದು ಬಂದಿದ್ದ ಬ್ರಹ್ಮಚಾರಿಯೊಬ್ಬ ಕುದುರೆ ಸವಾರ ಬಂದಿದ್ದಾನೆಂದು ಕೂಗುತ್ತಾ ಬಂದ. ಬಂದವನಾರಿರಬಹುದೆಂದು ನನ್ನ ಕಣ್ಣು ದ್ವಾರದತ್ತ ಹೊರಳಿತು. ಯಾವ ದೇಶದ ರಾಜನಿರಬಹುದು? ರಾಜನೋ ವಾ ರಾಜಕುಮಾರನೋ? ಕುಮಾರನೇ ಆಗಿದ್ದರೆ ರೂಪವಂತನಿರಬಹುದೇ? ಮಹರ್ಷಿಗಳನ್ನು ನೋಡುವ ಕಾರ್ಯ ಅವನಿಗೇಕಿರಬಹುದು? ಯಾವುದಾದರೂ ದೊಡ್ಡ ಯಾಗ ಮಾಡಿಸುತ್ತಿರಬಹುದೇ ಎಂಬಿತ್ಯಾದಿ ವಯೋಸಹಜ ಪ್ರಶ್ನೆಗಳು ನನ್ನನ್ನು ಕಾಡತೊಡಗಿದಂತೆ, ಖುರಪುಟದ ಸದ್ದು ಜೋರಾಯಿತು.
ಶ್ವೇತವರ್ಣದ ಆ ಕುದುರೆಯ ಮೇಲೇರಿಬಂದ ಮನ್ಮಥರೂಪಿಯ ದೇಹಸೌಂದರ್ಯಕ್ಕೆ ಹರೆಯದ ಮನಸ್ಸು ಸಂಪೂರ್ಣ ಶರಣಾಗಿತ್ತು. ಆಜಾನುಬಾಹು, ಮಧುವರ್ಣದ ಆ ತರುಣನ ಅಂಗಸೌಷ್ಟವ ಅವನನ್ನೇ ಪತಿಯಾಗಿ ವರಿಸಬೇಕೆಂದು ಹಟ ಹಿಡಿಯಲೂ ಸಿದ್ಧವಾಗುವಷ್ಟು ನನ್ನ ಮನಸ್ಸನ್ನು ತಲ್ಲಣಗೊಳಿಸಿತ್ತು. ಆದರೆ ನಾನೊಬ್ಬ ಬ್ರಾಹ್ಮಣಕುಮಾರಿಯೆಂಬುದು ನೆನಪಾಗಿ, ಕಲ್ಪನಾ ಲೋಕದಿಂದ ಹೊರಬಂದೆ. ಆದರೆ ಆ ತರುಣ ನನ್ನನ್ನು ತದೇಕಚಿತ್ತದಿಂದ ನೋಡುತ್ತಿರುವುದು ಈಗ ನನ್ನ ಗಮನಕ್ಕೆ ಬಂತು. ನಾನು ಹೇಗೆ ಅವನಲ್ಲಿ ಆಕರ್ಷಿತನಾಗಿದ್ದೆನೋ ಹಾಗೆ ಅವನೂ ನನ್ನ ಮೇಲೆ ಮೋಹಿತನಾಗಿರುವುದು ಸ್ಪಷ್ಟವಾಗಿತ್ತು. ನಾನು 'ಆರ್ಯ, ತಾವು ಯಾರು? ಯಾಕಾಗಿ ಇಲ್ಲಿ ಬರೋಣವಾಯಿತು?' ಎಂದದ್ದು ಆತನ ದೃಷ್ಟಿಯನ್ನು ಬೇರೆಡೆ ಹೊರಳಿಸಿತ್ತು. 'ಆರ್ಯ' ಎಂದ ಆಪ್ತತೆ ಅರ್ಥವಾಯಿತೆಂದೆನಿಸಿತು. 'ದುಷ್ಯಂತ' ಎಂದಷ್ಟೇ ನುಡಿದು ಸುಮ್ಮನಾದ. ಬಂದವನು ಕ್ಷತ್ರಿಯಕುಮಾರನೇ ಎಂದು ಸ್ಪಷ್ಟವಾಯಿತು. ದುಷ್ಯಂತ ಚಕ್ರವರ್ತಿಯ ಸಾಹಸಗಾಥೆಗಳು ಬಾಯಿಂದಬಾಯಿಗೆ ಹರಡಲು ಪ್ರಾರಂಭವಾಗಿ ವರ್ಷಗಳೇ ಉರುಳಿವೆ. ತನ್ನ ಹದಿನಾರನೇ ವಯಸ್ಸಿಗೆ ಸಿಂಹಾಸನಾರೂಢನಾಗಿ ಪ್ರಜಾಪಾಲನೆಯಲ್ಲಿ ತೊಡಗಿರುವ ಚಕ್ರವರ್ತಿ ನಮ್ಮ ಆಶ್ರಮದ ಬಾಗಿಲಿಗೆ ಬಂದಿದ್ದಾನೆಂದು ಮನಸ್ಸು ಹಾರಾಡತೊಡಗಿತು. ಅವನೇ ಮುಂದುವರಿದ, 'ಬೇಟೆಗೆಂದು ಬಂದಿದ್ದೆ. ತೀವ್ರ ಬಾಯಾರಿಕೆ. ಸ್ವಲ್ಪ ನೀರು ಸಿಗಬಹುದೇ?' ಎಂದ. ಕೂಡಲೇ ಬಾಗಿಲಿನಿಂದ ಒಳಗೋಡಿದ್ದೆ ಮಾರುತ್ತರಿಸದೇ.
ಬೇಟೆಯಾಡಿ ಆಯಾಸವಾಗಿ ನೀರು ಕೇಳಲು ಬಂದವನು ನನ್ನೊಡನೆ ಇದ್ದು ಮಾಸವಾಗಿಹೋಗಿತ್ತು. ರೂಪ, ಗುಣ, ಪರಾಕ್ರಮದಿಂದ ನನ್ನ ಮನಸ್ಸು ಗೆದ್ದವನು ಕಣ್ವರು ಮರಳಿದ ಮೇಲೆ ಅವರನ್ನೊಪ್ಪಿಸಿ, ಮದುವೆಯಾಗಿ, ಅವನೊಡನೆ ಕರೆದುಕೊಂಡು ಹೋಗಿಯೇ ತೀರುತ್ತೇನೆಂದು ನನ್ನೊಡನೆ ಆಶ್ರಮದಲ್ಲೇ ಬೀಡುಬಿಟ್ಟಿದ್ದ. ಏಕಾಂತದಲ್ಲಿದ್ದಾಗ ಮಾನವ ಸಹಜ ಕಾಮೋತ್ತೇಜನಗೊಂಡು, ಸೇರುವ ಬಯಕೆ ವ್ಯಕ್ತಪಡಿಸಿದ್ದ. ವಿವಾಹಪೂರ್ವ ದೈಹಿಕ ಸಂಬಂಧಕ್ಕೆ ನಾನು ಒಪ್ಪದ ಕಾರಣ, ಆಶ್ರಮದ ಪೂಜಾಪೀಠದ ಮುಂದೆ ಗಾಂಧರ್ವ ವಿವಾಹವಾಗಿದ್ದ. ರಾಜಮುದ್ರೆಯಿದ್ದ ಅವನ ಉಂಗುರವನ್ನು ನನ್ನ ಬೆರಳಿಗೆ ವಿವಾಹದ ಸಂಕೇತವಾಗಿ ನನಗೆ ತೊಡಿಸಿದ್ದ. ಅದರ ನಂತರವೇ ಅವನನ್ನು ಸೇರಲು ಸಹಕರಿಸಿದ್ದೆ. ಎಲ್ಲವೂ ಸುಖವಾಗಿತ್ತು. ದಿನಗಳುರುಳುತ್ತಿದ್ದವು. ಒಂದು ಸಂಜೆ ಉದ್ಯಾನದಲ್ಲಿ ನಾವು ವಿಹರಿಸುತ್ತಿದ್ದಾಗ, ದೂತನೊಬ್ಬ ಬಂದು ರಾಜಕಾರ್ಯವೊಂದರ ನೆಪವೊಡ್ಡಿ ರಾಜಧಾನಿಗೆ ಮರಳಲು ರಾಜಗುರು ಕರೆಹೇಳಿದ್ದಾರೆಂದು ಬಿನ್ನವಿಸಿದ್ದ. ಗುರುಗಳ ಮಾತಿಗೆ ಎದುರಾಡಲಾಗದೇ ದುಷ್ಯಂತ ಹೊರಡಲು ಸಿದ್ಧನಾದ. ನನ್ನ ಕಣ್ಣಂಚಲ್ಲಿ ನೀರು ಜಿನುಗುತ್ತಿತ್ತು. ನನ್ನ ಬಳಿಬಂದು ಒಮ್ಮೆ ಬಿಗಿಯಾಗಿ ಅಪ್ಪಿ ಮುದ್ದಿಸಿದ. ಕಣ್ವರು ಆಶ್ರಮಕ್ಕೆ ಬಂದಕೂಡಲೇ ವಿಷಯವೆಲ್ಲಾ ಅರುಹಿ, ರಾಜಧಾನಿಗೆ ಬರಬೇಕೆಂದು ಹೇಳಿ, ಎಂದೆಂದಿಗೂ ನನ್ನ ಕೈಬಿಡುವುದಿಲ್ಲವೆಂದು ಪ್ರಮಾಣ ಮಾಡಿ ರಾಜಧಾನಿಗೆ ಹಿಂದಿರುಗಿದ. ಅವನ ನೆನಪಲ್ಲೇ ಮತ್ತೆ ಎರಡು ಮಾಸಗಳು ಕಳೆದದ್ದು ನನ್ನ ಗಮನಕ್ಕೆ ಬರಲೇ ಇಲ್ಲ.
ಪೂಜಾಮಂದಿರದಲ್ಲಿ ಚಿಂತೆಯಿಂದ ಕುಳಿತಿದ್ದ ನನಗೆ, ಕಣ್ವರು ಆಶ್ರಮಕ್ಕೆ ಮರಳಿದ ವಿಷಯವನ್ನು ಬ್ರಹ್ಮಚಾರಿಯೊಬ್ಬ ಬಂದು ತಿಳಿಸಿದ. ಕಣ್ವರನ್ನು ಕಂಡು, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವ ಧೈರ್ಯ ನನಗಿರಲಿಲ್ಲ. ದುಷ್ಯಂತ ಮಹಾರಾಜರ ವಿಚಾರವನ್ನು ತಿಳಿಸಲು ಇರುವ ಭಯವೊಂದಾದರೆ, ಯಾರಲ್ಲಿಯೂ ಹೇಳಿಕೊಳ್ಳಲಾಗದ ಭಯವೊಂದು ಮನದಲ್ಲಿಯೇ ಕೊರೆಯುತ್ತಿತ್ತು. ಹೌದು, ಋತುಮತಿಯಾಗಿ ಮೂರು ತಿಂಗಳಾಗಿತ್ತು. ದುಷ್ಯಂತನ ಕುಡಿ ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಖಾತ್ರಿಯಾಗಿತ್ತು. ಆ ದುಗುಡ ಅಪ್ಪನ ಎದುರು ಹೋಗದಂತೆ ನನ್ನನ್ನು ತಡೆದಿತ್ತು. ಗಟ್ಟಿ ಮನಸ್ಸು ಮಾಡಿ ಇದ್ದಿದ್ದೆಲ್ಲಾ ಹೇಳಬೇಕೆಂದು ಹೊರಟೆ. ಕಣ್ವರ ಪೂಜಾ ಮಂದಿರದ ಬಾಗಿಲಲ್ಲಿ ನಿಂತು ಇಣುಕಿದೆ. ಅಪ್ಪನ ಮುಖ ಕೆಂಪಾಗಿತ್ತು. ಅವರು ಹೋದ ನಂತರ ಜರುಗಿದ ಎಲ್ಲಾ ಘಟನೆಗಳನ್ನೂ ಅವರ ಶಿಷ್ಯ ಮಹೇಶ್ವರ ಚಾಚೂ ತಪ್ಪದೇ ವರದಿ ಒಪ್ಪಿಸಿದ್ದು ಅರ್ಥವಾಯಿತು. ತಲೆ ಎತ್ತುವ ಧೈರ್ಯವಿಲ್ಲದೇ ತಲೆ ತಗ್ಗಿಸಿದೆ.
'ಯಾರವನು?' ಕಣ್ವರ ದನಿಯಲ್ಲಿ ಕ್ರೋಧವಿತ್ತು. ಒಂದೇ ಉಸಿರಿನಲ್ಲಿ ಆದದ್ದೆಲ್ಲವನ್ನೂ ವಿವರಿಸಿಬಿಟ್ಟೆ. ಗರ್ಭವತಿಯೆಂದು ತಿಳಿದು ಅಪ್ಪ ಎರಡೇಟು ಕೊಡುತ್ತಾರೆಂದು ಹೆದರಿ ನಿಂತೆ. ಅಪ್ಪ ಮಾತನಾಡಲಿಲ್ಲ. ಕೆಲ ನಿಮಿಷಗಳ ಮೌನದ ನಂತರ, ಪ್ರಯಾಣದ ತಯಾರಿ ಮಾಡು ಎಂದಷ್ಟೆ ನುಡಿದು, ಸ್ನಾನದ ಮನೆಯತ್ತ ತೆರಳಿದರು.
ರಾಜಧಾನಿಯಿಂದ ಮರಳಿದವಳಿಗೆ ಬರಸಿಡಿಲು ಬಡಿದಂತಾಗಿತ್ತು. ದುಷ್ಯಂತ ಮಹಾರಾಜನನ್ನು ಕಂಡು, ನನ್ನನ್ನು ಅವರಿಗೆ ಕನ್ಯಾದಾನ ಮಾಡಿ ಕೊಡಲು ಒಪ್ಪಿ ಅಪ್ಪ ರಾಜಧಾನಿಗೆ ಕರೆದುಕೊಂಡು ಹೋಗಿದ್ದರು. ರಾಜಸಭೆಗೆ ಪ್ರವೇಶಿಸುತ್ತಿದ್ದಂತೆ ದುಷ್ಯಂತ ಓಡಿ ಬಂದು ಅಪ್ಪನ ಕಾಲಿಗೆ ಬಿದ್ದ. ಸಿಂಹಾಸನದ ಮೇಲೆ ಕೂರಿಸಿ ಪಾದಪೂಜೆ ಮಾಡಿದ. ಉಭಯಕುಶಲೋಪರಿ, ಮಂತ್ರಾಶೀರ್ವಾದಗಳಾದಮೇಲೆ, ಕಣ್ವರು ವಿಷಯ ಅರುಹಿದರು. ನಮ್ಮ ಗಂಧರ್ವ ವಿವಾಹವನ್ನೊಪ್ಪಿ ಸಕಲ ಶಾಸ್ತ್ರ ಸಮ್ಮತವಾಗಿ ಕನ್ಯಾದಾನವನ್ನು ಮಾಡುವುದಾಗಿ ತಿಳಿಸಿದರು. ಆದರೆ ದುಷ್ಯಂತನ ವರ್ತನೆ ನನಗೆ ಆಘಾತವನ್ನುಂಟುಮಾಡಿತು. ತುಂಬಿದ ಸಭೆಯಲ್ಲಿ, ಅವನಿಂದಲೇ ಗರ್ಭವತಿಯಾದ ನನ್ನನ್ನು ಪರಿಚಯವಿಲ್ಲದವಳೆಂವೆಂದುಬಿಟ್ಟ. ಆಶ್ರಮಕ್ಕೆ ಬಂದಿಲ್ಲವೆಂದೂ, ನನ್ನನ್ನು ಕಂಡಿಲ್ಲವೆಂದೂ ಖಡಾಖಂಡಿತವಾಗಿ ಹೇಳಿಬಿಟ್ಟ. ನಾನು ಗಾಂಧರ್ವ ವಿವಾಹವಾದದ್ದಕ್ಕೆ ಸಾಕ್ಷ್ಯ ಕೇಳಿದ. ಕೈಯಲ್ಲಿದ್ದ ಉಂಗುರ ತೋರಿಸೋಣವೆಂದು ಎಡಗೈ ಉಂಗುರ ಬೆರಳನ್ನು ಹುಡುಕಿದೆ. ಉಂಗುರವಿರಲಿಲ್ಲ. ದುಷ್ಯಂತನನ್ನು ಸೇರುವ ತವಕದಲ್ಲಿ ಸರಯೂ ನದಿ ದಾಟುವಾಗ ನೀರಿನಲ್ಲಿ ಕೈಯಾಡಿಸುತ್ತಿದ್ದುದು ನೆನಪಾಯಿತು. ಇರುವ ಒಂದು ಪುರಾವೆಯೂ ಸರಯೂ ಪಾಲಾಗಿತ್ತು. ನಾನು ಮೂರ್ಛಿತಳಾದೆ. ಅದೊಂದೇ ನೆನಪಿದೆ ನನಗೆ. ಎದ್ದಾಗ ಯಾವುದೋ ಶಯನಾಗಾರದಲ್ಲಿದ್ದೆ. ನಾನು ಬಿದ್ದ ನಂತರ, ರಾಜಸಭೆಯಲ್ಲಿ ಕಣ್ವರಿಗೂ ದುಷ್ಯಂತನಿಗೂ ಮಾತಾಯಿತಂತೆ. ದುಷ್ಯಂತ ಮಾತ್ರ ನಾನು ಅವನ ಪತ್ನಿಯೆಂದು ಸ್ವೀಕರಿಸಲು ತಯಾರಾಗಲಿಲ್ಲವಂತೆ. ಅಪ್ಪನಿಗೆ, ರಾಜ್ಯದಾಸೆಗೆ ಮಗಳನ್ನು ಮಾರುವ ವ್ಯಭಿಚಾರಿಯೆಂದನಂತೆ. ಸಖಿ ಎಲ್ಲಾ ವಿಷಯ ಹೇಳಿದಾಗ ಮತ್ತೆ ನಿಶೆಯೇರಿದಂತಾಯಿತು. ದುಷ್ಯಂತನ ಸಖ್ಯ ಸರ್ವ ಸುಖವನ್ನೂ ನೀಡಿತ್ತು, ಆದರೆ ಈ ತಿರಸ್ಕಾರ ಬದುಕುವ ಆಸೆಯನ್ನೇ ಕೊಂದುಬಿಟ್ಟಿತ್ತು. ಸಾಯುವಷ್ಟು ಹೇಡಿ ನಾನಾಗಿರಲಿಲ್ಲ. ನನ್ನೊಡಲಲ್ಲಿರುವ ಭ್ರೂಣಕ್ಕೋಸ್ಕರ ಬದುಕಬೇಕೆಂದು ನಿರ್ಧರಿಸಿದೆ. ದುಷ್ಯಂತ ಮಾಡಿದ ಅವಮಾನಗಳನ್ನು ಸಹಿಸಿ, ಅವನ ಹಂಗಿಲ್ಲದೇ ಬದುಕಬಲ್ಲೆನೆಂದು ಸಮಾಜಕ್ಕೆ ಕೂಗಿ ಹೇಳಲು, ಆ ಜೀವಕ್ಕೆ ಜನ್ಮ ನೀಡಬೇಕೆಂದು ನಿರ್ಧರಿಸಿದೆ. ಅಪ್ಪ ಬಂದಾಗಲೂ ಅದೇ ಮಾತು ಹೇಳಿದ್ದೆ. ಕೆಲವೇ ಮಾಸಗಳಲ್ಲಿ, ನನ್ನೆಲ್ಲಾ ನೋವಿಗೂ ನಗುವಾಗಿ ಭರತ ಭೂಮಿಗೆ ಬಂದಿದ್ದ.
ಎಲ್ಲಾ ಘಟನೆಗಳೂ ನಿನ್ನೆ ಮೊನ್ನೆ ನಡೆದಂತೆ ಸ್ಮೃತಿಪಟಲದಲ್ಲಿ ಮೂಡಿ ಮರೆಯಾಗುತ್ತಿತ್ತು. ಹಳೆಯ ಕಹಿ ನೆನಪುಗಳ ನಡುವೆಯೂ ದುಷ್ಯಂತ ನೆನಪಾಗುತ್ತಿದ್ದ. ಅವನು ತೋರಿದ್ದ ನಿಷ್ಕಲ್ಮಷ ಪ್ರೀತಿ ಮತ್ತೆ ಮತ್ತೆ ಬೇಕೆಂದು ಮನಸ್ಸು ಹಂಬಲಿಸುತ್ತಿತ್ತು. ಅವನೊಡನೆ ಇದ್ದಾಗಿನ ಯಾವ ಕ್ಷಣವೂ ಮೋಸವೆಂದೆನಿಸಿರಲಿಲ್ಲ, ರಾಜಸಭೆಯಲ್ಲಿದ್ದ ಸಮಯವನ್ನು ಹೊರತಾಗಿ. ಅವನು ತೋರಿದ ಯಾವ ಕನಿಕರವೂ ಕಪಟವೆಂದೆನಿಸಿರಲಿಲ್ಲ, ಅವಳು ಯಾರೆಂದು ತಿಳಿದಿಲ್ಲವೆಂದ ಮಾತೊಂದನ್ನು ಬಿಟ್ಟು. ತದೇಕಚಿತ್ತದಿಂದ ನೋಡುತ್ತಿದ್ದ ಅವನ ಕಣ್ಣಿನಲ್ಲಿ ಬರಿಯ ಕಾಮ ಯಾವತ್ತೂ ನನಗೆ ಕಾಣಲಿಲ್ಲ. ಇದೆಲ್ಲವನ್ನು ನೆನಪಿಸಿಕೊಂಡು ನಿದ್ರೆ ತ್ಯಜಿಸಿದ್ದ ನನಗೆ, ಸೂರ್ಯೋದಯವಾಗುತ್ತಿದ್ದುದು ಗುರುತಾಗಿ, ಎದ್ದುಕುಳಿತೆ. ಭರತ, ಸೂರ್ಯೋದಯದ ನಂತರ ಮಲಗುವವನಲ್ಲ. ಮಗುವಾದರೂ ಬೇಗ ಏಳುತ್ತಾನೆ, ರಾತ್ರಿ ಬೇಗ ಮಲಗುತ್ತಾನೆ. ಹೀಗಾಗಿ ಸೂರ್ಯೋದಯದ ಮುಂಚೆ ಏಳುವುದು ನನಗೂ ರೂಢಿಯಾಗಿಬಿಟ್ಟಿತ್ತು. ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಪೂಜೆಗೆ ತಯಾರಿಮಾಡತೊಡಗಿದೆ.
ಸೂರ್ಯ ನೆತ್ತಿಯ ಮೇಲೆ ಬರುತ್ತಿದ್ದ. ಭರತನ ಸ್ನಾನವಾಗಿತ್ತು. ಮಧ್ಯಾಹ್ನದ ಭೋಜನದ ತಯಾರಿಯಲ್ಲಿದ್ದೆ. ಅಮ್ಮಾ ಎಂದು ಭರತ ಚೀರಿದ. ಹೆದರಿಕೆಯ ಚೀರಾಟವಲ್ಲ ಅವನದು. ಧೈರ್ಯವಂತ ಅವನು, ಅಪ್ಪನ ಹಾಗೇ. ಯಾಕೆ ಕರೆಯುತ್ತಿರಬಹುದೆಂದು ಚಿಂತಿಸಿ, ಉರುವಲನ್ನು ಹೊರಗೆಳೆದು ಬಾಗಿಲಿನತ್ತ ಓಡಿದೆ. ಭರತ ಬರುತ್ತಿರುವುದು ಕಂಡಿತು. ಒಬ್ಬನೇ ಅಲ್ಲ. ಜೊತೆಗೊಬ್ಬ ಆಜಾನುಬಾಹು ವ್ಯಕ್ತಿ. ಆತ ಭರತನನ್ನು ಭುಜದ ಮೇಲೆ ಕೂರಿಸಿಕೊಂಡು ಬಂದಿದ್ದ. ಅವರಿಬ್ಬರೂ ನನ್ನೆಡೆಗೆ ಬರುತ್ತಿದ್ದಂತೆ ಸಣ್ಣ ಕಂಪನ ಶುರುವಾಯಿತು. ಭರತನನ್ನು ಹೆಗಲಿಂದ ಕೆಳಗಿಳಿಸಿ, ಶಕುಂತಲಾ ಎಂದನಷ್ಟೇ. ಕಣ್ಣಂಚಲ್ಲಿ ಜಿನುಗಿದ ನೀರು ಪಾದದ ಮೇಲೆ ಪಟಪಟನೆ ಬಿದ್ದದ್ದು ನನಗೂ ಅರಿವಾಯಿತು. ಅವನ ಕಣ್ಣೂ ತೇವವಾದದ್ದು ಕಂಡಿತು. ಯಾವ ಇತಿಹಾಸದ ಪರಿವೆಯೂ ಇಲ್ಲದ ಭರತ, ಅಪ್ಪನ ಹೆಗಲಿಂದ ಕೆಳಗಿಳಿದವನೇ ಮತ್ತೆ ಆಟವಾಡಲು ದೂರ ಓಡಿದ್ದ. ದುಷ್ಯಂತ ನನ್ನನ್ನು ಅವನ ಬಾಹುಗಳಲ್ಲಿ ಬಿಗಿದಪ್ಪಿ ಕಣ್ಣೀರು ಸುರಿಸಿದ. ಯಾವುದೋ ಶಾಪದಿಂದ ಅವನಿಗೆ ನಮ್ಮ ಸಂಧಿ ಮರೆತದ್ದಾಗಿಯೂ, ಅದಕ್ಕೆ ರಾಜಸಭೆಯಲ್ಲಿ ನನ್ನ ಪರಿಚಯವಿಲ್ಲವೆಂದದ್ದಾಗಿಯೂ, ಅಡುಗೆಗೆ ತಂದ ಮೀನಿನ ಹೊಟ್ಟೆಯಲ್ಲಿ ಅವನು ನನಗೆ ವಿವಾಹದ ಕುರುಹಾಗಿ ನೀಡಿದ್ದ ಉಂಗುರವಿದ್ದುದಾಗಿಯೂ, ಪಾಕಶಾಲೆಯವರಿಗೆ ಅದು ದೊರೆತದ್ದಾಗಿಯೂ, ಅದನ್ನು ಅವರು ಮಹಾರಾಜನಿಗೆ ನೀಡಿದಾಗ ಹಳೆಯದೆಲ್ಲ ನೆನಪಾಗಿ ನನ್ನರಸಿ ಬಂದದ್ದಾಗಿಯೂ ಏನೇನೋ ಹಲುಬುತ್ತಿದ್ದ. ನನ್ನ ಅಂತರಾತ್ಮ ಮಾತ್ರ ಅದ್ಯಾವುದನ್ನೂ ಕೇಳುವ ವ್ಯವಧಾನದಲ್ಲಿರಲಿಲ್ಲ. ಅವನು ತೋರಿದ ನಿಷ್ಕಲ್ಮಷ ಪ್ರೀತಿಯ ಮತ್ತಿನಲ್ಲಿ ತೇಲುತ್ತಿದ್ದೆ. ಅವನನ್ನು ಅವನಿಗಿಂತಲೂ ಗಟ್ಟಿಯಾಗಿ ಬಿಗಿದಪ್ಪಿ ಮುದ್ದಿಸುತ್ತಿದ್ದೆ. ಹಳೆಯದ್ಯಾವುದೂ ನೆನಪಿನಲ್ಲಿರಲಿಲ್ಲ. ನೀರು ಕೇಳಿಬಂದ ದುಷ್ಯಂತನ ರೂಪ ಮಾತ್ರ ಮುಚ್ಚಿದ ಕಣ್ಣಿನಲ್ಲೂ ಮಿಂಚುತ್ತಿತ್ತು. ಮನಸು ಅವನಪ್ಪುಗೆಯಲ್ಲಿ ಬಂಧಿಯಾಗಿತ್ತು. ನನ್ನಿಂದ ಹೊರಟ ಸಂತೃಪ್ತಿಯ ಬಿಸಿಯುಸಿರು, ಅವನೆದೆಗೆ ಬಡಿಯುತ್ತಿತ್ತು. ಮುತ್ತಿಡುತ್ತಿತ್ತು.!!
-
ಶಿವಪ್ರಸಾದ ಭಟ್ಟ, ನೀಲ್ಮನೆ.