ಮನೆಗೆ ಹೋಗುವ ಗಡಿಬಿಡಿಯಲ್ಲಿ ಗ್ರಾಫೈಟ್ ಇಂಡಿಯಾದಿಂದ ಮಾರತಹಳ್ಳಿ ಕಡೆಗೆ ಹೋಗುವ ಬಸ್ ಹತ್ತಿದ್ದೆ. ಬ್ಯಾಗ್ ತಂದಿರಲಿಲ್ಲವಾದ್ದರಿಂದ ಗಣೇಶಯ್ಯನವರ ‘ಶಾಲಭಂಜಿಕೆ’ ಮತ್ತು ಕಾಯ್ಕಿಣಿಯವರ ‘ತೂಫಾನ್ ಮೇಲ್’ ಪುಸ್ತಕಗಳು ಕೈಯಲ್ಲೇ ಇದ್ದವು. ಬಸ್ ಸಂಪೂರ್ಣ ಖಾಲಿಯಿತ್ತು. ನಾನು ಮತ್ತಿಬ್ಬರನ್ನು ಹೊರತುಪಡಿಸಿ ಇನ್ಯಾರೂ ಇರಲಿಲ್ಲ. ಪಕ್ಕದ ಸೀಟ್ ಖಾಲಿ ಇದ್ದಿದ್ದಕ್ಕೆ ಕೈಲಿದ್ದ ಎರಡೂ ಪುಸ್ತಕಗಳನ್ನು ಅಲ್ಲೇ ಇಟ್ಟು ಕುಳಿತೆ. ಟಿಕೆಟ್ ಕೇಳಲು ಬಂದ ಕಂಡಕ್ಟರ್ ಗೆ 'ಪಾಸ್ ಇದೆ ಸಾರ್' ಎಂದೆ. ಸರಿ ಎಂದು ಹಾಗೇ ಪಕ್ಕ ನಿಂತವ ನಾನು ಪಕ್ಕದಲ್ಲಿಟ್ಟಿದ್ದ ಪುಸ್ತಕಗಳನ್ನೇ ನೋಡೋಕೆ ಶುರು ಮಾಡಿದ. 'ಕನ್ನಡ ಸಾಹಿತ್ಯ ಓದ್ತೀರಾ ಸಾರ್?' ಎಂದು ಮಾತು ಶುರು ಮಾಡಿದರು. 'ಹೌದು ಸಾರ್. ಒಂದ್ ಥರಾ ಚಟ. ಬಿಡುವಿನ ಸಮಯದಲ್ಲಿ ಓದಿ ಸಮಯ ಹಾಳು ಮಾಡ್ತೀನಿ' ಅಂದೆ.
'ತುಂಬಾ ಸಂತೋಷ. ನಾನು ಓದ್ತೀನಿ. ಆದ್ರೆ ಈಗೀಗ ಕೆಲಸ ಜಾಸ್ತಿ ಆಗಿ ಅಭ್ಯಾಸ ತಪ್ಪೋಗಿದೆ. ಏನ್ ಮಾಡ್ಕೊಂಡಿದೀರಾ ಸಾರ್?' ಅಂದ.
'ಸಾಫ್ಟ್ ವೇರ್ ಇಂಜಿನೀಯರ್. ಇಲ್ಲೇ ಜೇಪೀ ಮಾರ್ಗನ್ ಪಕ್ಕ ಆಫೀಸ್' ಅಂದೆ.
'ಹೌದಾ ಸಾರ್.. ಆ ಫೀಲ್ಡ್ ಅಲ್ಲಿದ್ದು ಸಾಹಿತ್ಯ ಅದು ಇದು ಅಂತೆಲ್ಲ ಓದ್ತೀರಾ ಅಂದ್ರೆ ಗ್ರೇಟ್ ಬಿಡಿ ಸಾರ್. ನಾನು ಕಾಲೇಜ್ ಹೋಗೋವಾಗಿಂದ ಸಾಹಿತ್ಯ ಓದೋದು ಹವ್ಯಾಸ. ತುಂತುರು ಚಂಪಕದಿಂದ ಶುರು ಆದದ್ದು ಸಿಕ್ಕ ಸಿಕ್ಕ ಕಾದಂಬರಿ, ಕಥಾ ಸಂಕಲನ ಎಲ್ಲಾನೂ ಓದ್ತಿದ್ದೆ. ಭೈರಪ್ಪನವರ ಕಾದಂಬರಿ ಅಂದ್ರೆ ಪ್ರಾಣ ಸಾರ್. ಯಾವ ಮುಲಾಜೂ ಇಲ್ದೇ, ಕೆಲವರ ಮುಖಕ್ಕೆ ಹೊಡೆದಹಾಗೆ ಬರಿತಾರಲ್ಲಾ ಸಾರ್, ಅದು ಇಷ್ಟ. ಆದ್ರೂ ಅವರಿಗೊಂದು ಜ್ನಾನಪೀಠ ಬರ್ಬೇಕಿತ್ತು ಅಲ್ವಾ ಸಾರ್?' ಅಂತ ಪಟಪಟನೆ ಉಸುರಿದರು.
'ಹೌದು ಇವ್ರೆ.! ಏನು ಮಾಡೋದು, ರಾಜಕೀಯ ಇಲ್ದೇ ಇರೋ ಕ್ಷೇತ್ರ ಯಾವ್ದೂ ಇಲ್ಲ ಅಲ್ವಾ?' ಎಂದೆ.
'ಹೌದು ಸಾರ್. ಆದ್ರೂ ಕನ್ನಡ ಓದೋದು ಸಿಗೋದೇ ಕಮ್ಮಿ ಅಲ್ವಾ..' ಅಂತ ಶುರು ಮಾಡಿದವರು, ಅವರ ಓದಿನ ಇತಿಹಾಸವನ್ನೇ ಹೇಳಿಬಿಟ್ಟರು. ನಮ್ ಹತ್ತು ನಿಮಿಷದ ಮಾತುಕತೆಯಲ್ಲಿ ಗೃಹಭಂಗ, ಮಲೆಗಳಲ್ಲಿ ಮದುಮಗಳು, ಕರ್ವಾಲೋ, ನಾಯಿ ನೆರಳು, ಉತ್ತರಕಾಂಡ, ಯಾನ, ಕುಸುಮಬಾಲೆ, ವಂಶವೃಕ್ಷ, ದಾಟು, ಅಂಚು, ತಂತು, ಮಹಾಕ್ಷತ್ರಿಯ, ಪ್ಲೈಯಿಂಗ್ ಸಾಸರ್, ಪಾಪಿಗಳ ಲೋಕದಲ್ಲಿ, ಸರ್ಪ ಸಂಬಂಧ, ರಾಮಾಯಣದರ್ಶನಂ ಇತ್ಯಾದಿ ಮೂವತ್ತಕ್ಕೂ ಹೆಚ್ಚು ಪುಸ್ತಕಗಳ ಹೆಸರು ಆ ಪುಣ್ಯಾತ್ಮನ ಬಾಯಿಂದ ಬಂತು.
'ಸುಮ್ನೆ ಕೇಳ್ತೀನಿ, ಏನ್ ಓದಿದೀರಾ ಸಾರ್ ನೀವು?' ಅಂದೆ.
'ಇಂಗ್ಲೀಷ್ ಬಿ.ಏ ಮಾಡ್ದೆ ಸಾರ್. ಅದಾದ್ಮೇಲೆ ಡಿ.ಎಡ್ ಮಾಡಿದ್ದೆ. ಈ ಕೆಲಸ ಸಿಕ್ತು. ಗವರ್ನ್ಮೆಂಟ್ ಜಾಬ್ ಅಲ್ವಾ ಬಿಡೋದು ಯಾಕೆ ಅಂತ ಸೇರ್ಕೊಂಬಿಟ್ಟೆ.' ಅಂದ.
ಸಣ್ಣದೊಂದು ನಗು ಬಿಟ್ಟರೆ ಬೇರೆ ಏನೂ ಹೇಳೋ ಸ್ಥಿತಿಯಲ್ಲಿ ನಾನಿರ್ಲಿಲ್ಲ. ಅವರ ಜೊತೆ ಮಾತಾಡಿದ್ದರಲ್ಲಿ ನಾನು ಗಮನಿಸಿದ ಒಂದು ಅಂಶ, ಆ ಮನುಷ್ಯನ ಮಾತಿನಲ್ಲಿ ಇದ್ದ ಉಚ್ಛಾರದ ಸ್ಪಷ್ಟತೆ. ಸಾಮಾನ್ಯವಾಗಿ ನಾನು ಗಮನಿಸಿದಂತೆ ಬೆಂಗಳೂರಿಗರ ಮಾತಿನಲ್ಲಿ 'ಅ'ಕಾರ ಮತ್ತು 'ಹ'ಕಾರದ ಸ್ಪಷ್ಟತೆ ಕಡಿಮೆ ಇರುತ್ತದೆ. ಆದರೆ ಈ ವ್ಯಕ್ತಿ ಅತ್ಯಂತ ಸ್ಪಷ್ಟ ಮತ್ತು ಶುದ್ಧ ಕನ್ನಡ ಮಾತನಾಡಿದ್ದ.
ಮಾರತಹಳ್ಳಿ ಹತ್ತಿರ ಬಂತು. 'ಸರಿ ಸಾರ್. ಅದೃಷ್ಟ ಇದ್ರೆ ಮತ್ತೊಮ್ಮೆ ಸಿಗೋಣ' ಎಂದಷ್ಟೆ ಹೇಳಿ ಎದ್ದೆ. ಆ ವ್ಯಕ್ತಿ ಸುಮ್ಮನೆ ನಕ್ಕು 'ಬಾಯ್ ಸಾರ್' ಅಂದ. ಬಿಡುವಿನ ವೇಳೆಯಲ್ಲಿ ಸಾಹಿತ್ಯ, ನಾಟಕ, ಬರವಣಿಗೆ ಅಂತ ಆಸಕ್ತಿ ತೋರಿಸ್ತೀನಿ ಅಂತ ಬಹಳ ಸಮಯದಿಂದ ನನಗೇ ತಿಳಿಯದ ಅಹಂಭಾವ ನನ್ನೊಳಗಡೆ ಇತ್ತು. ಆದರೆ ಇವತ್ತು ಬಸ್ ಇಳಿಯುವಷ್ಟರಲ್ಲಿ ನನಗೇ ತಿಳಿಯದಂತೇ ಸಮಾಧಿಯಾಯಿತು.
No comments:
Post a Comment