ಅದೊಂದು ಸುಂದರ ಸರೋವರ. ಆ ಸರೋವರವು ಬಹಳ ಕಾಲದಿಂದ ಮೀನುಗಳು, ಕಪ್ಪೆಗಳು, ಹಾವು ಆಮೆಗಳ ವಾಸಸ್ಥಾನವಾಗಿತ್ತು. ಆ ಸರೋವರದಲ್ಲಿ ಏಕಬುದ್ಧಿ ಎಂಬ ಕಪ್ಪೆಯೂ, ಶತಬುದ್ಧಿ-ಸಹಸ್ರಬುದ್ಧಿಯೆಂಬ ಮೀನುಗಳೂ ಸ್ನೇಹಿತರಾಗಿದ್ದರು. ತಮ್ಮ ಕುಟುಂಬದ ಸಹಿತ ಬಹಳ ವರ್ಷಗಳಿಂದ ಅದೇ ಸರೋವರದಲ್ಲಿ ನೆಲೆಸಿದ್ದವು. ಹೀಗಿರಲು ಒಂದು ದಿನ, ಏಕಬುದ್ಧಿ ಸರೋವರದ ದಡದಲ್ಲಿ ಕುಳಿತಿದ್ದಾಗ ಮಾವನರ ಗುಂಪೊಂದು ಬಂದು ಸರೋವರವನ್ನು ನೋಡಿ ಮಾತನಾಡತೊಡಗಿದರು.
" ದಿನವೂ ಮೀನು ಹಿಡಿಯುತ್ತಿದ್ದ ನದಿಯಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿದೆ, ನಾಳೆ ಬೆಳಿಗ್ಗೆ ಬಂದು ಸರೋವರದ ನೀರನ್ನೆಲ್ಲಾ ಖಾಲಿಮಾಡಿ ಸಿಕ್ಕಷ್ಟು ಮೀನುಗಳನ್ನು ಹಿಡಿದುಕೊಂಡು ಹೋಗೋಣ" ಎಂದು ನಿರ್ಧಾರ ನೀಡಿದ ಆ ಗುಂಪಿನ ಮುಖಂಡ.
ಇದನ್ನೆಲ್ಲಾ ಕೇಳಿದ ಏಕಬುದ್ಧಿ ಭಯದಲ್ಲಿ ಕಂಪಿಸತೊಡಗಿತು. ನೇರವಾಗಿ ತನ್ನ ಸ್ನೇಹಿತರ ಬಳಿ ಬಂದು ಎಲ್ಲಾ ವಿಷಯ ಹೇಳಿತು. ಸಾಧ್ಯವಾದರೆ ಕೂಡಲೇ ಪಕ್ಕದಲ್ಲಿರುವ ಸಣ್ಣ ಕೊಳಕ್ಕೆ ವಲಸೆ ಹೋಗಿ ನೆಲೆಸಿಬಿಡುವ ಎಂದು ಸಲಹೆ ನೀಡಿತು.
"ಮನುಷ್ಯಮಾತ್ರರಿಗೆ ಇಷ್ಟು ದೊಡ್ಡ ಸರೋವರವನ್ನು ಖಾಲಿ ಮಾಡಲು ಸಾಧ್ಯವೇ? ಯಾವ ಕಾಲಕ್ಕೂ ಆಗದ ಮಾತು. ಸುಮ್ಮನೇ ಇಲ್ಲದ ಆಲೋಚನೆ ಮಾಡುವುದು ಬಿಟ್ಟು ಆರಾಮವಾಗಿರು" ಎಂದಿತು ಸಹಸ್ರಬುದ್ಧಿ.
ಶತಬುದ್ಧಿ ಮುಂದುವರಿದು, "ಅವರು ಬಂದೇ ಬರುತ್ತಾರೆ ಎಂದು ನನಗಂತೂ ನಂಬಿಕೆಯಿಲ್ಲ. ಸುಮ್ಮನೇ ಮಾತನಾಡಿರಬಹುದು. ಒಂದುವೇಳೆ ಬಂದರೆ, ಮತ್ತೆ ನೋಡೋಣ. ಸಣ್ಣ ಕೊಳ ಇಲ್ಲೇ ಪಕ್ಕದಲ್ಲಿದೆ, ಅವರು ಬಂದೊಡನೇ ಹೋಗಿಬಿಟ್ಟರಾಯ್ತು" ಎಂದಿತು.
ಆದರೆ ಏಕಬುದ್ಧಿಗೆ ಮಿತ್ರರ ಈ ಅಲಕ್ಷ್ಯ ಹಿಡಿಸಲಿಲ್ಲ. ಜೀವವಿದ್ದರೆ ಎಲ್ಲಾದರೂ ಬದುಕುವ ಎಂದು ರಾತ್ರಿಯೇ ಹೆಂಡತಿ ಮಕ್ಕಳನ್ನು ಕರೆದುಕೊಂಡು ಪಕ್ಕದ ಸರೋವರಕ್ಕೆ ಜಿಗಿದುಬಿಟ್ಟಿತು. ಮುಂಜಾನೆ ಸೂರ್ಯ ಉದಯಿಸುತ್ತಿರುವಾಗಲೇ ಬೆಸ್ತರ ಗುಂಪು ಸರೋವರಕ್ಕೆ ಲಗ್ಗೆಯಿಟ್ಟು ಯಂತ್ರಗಳಿಂದ ನೀರನ್ನು ಖಾಲಿಮಾಡಿಬಿಟ್ಟರು. ವಿಲವಿಲನೆ ಒದ್ದಾಡುತ್ತಿದ್ದ ಮೀನುಗಳನ್ನೆಲ್ಲಾ ಹೆಕ್ಕಿ ತಮ್ಮ ಬುಟ್ಟಿಯೊಳಗೆ ತುಂಬಿಸಿಕೊಂಡರು. ಬೇಕಾದಷ್ಟು ಮೀನುಗಳನ್ನು, ಆಮೆಗಳನ್ನು ಹಿಡಿದು ತೆರಳಿದರು.
ಬೆಸ್ತನೊಬ್ಬ ಶತಬುದ್ಧಿಯನ್ನು ತನ್ನ ತಲೆಯಮೇಲೆ ಹೊತ್ತು ನಡೆಯುತ್ತಿದ್ದ. ಸಹಸ್ರಬುದ್ಧಿ ಇನ್ನೊಬ್ಬ ಬೆಸ್ತನ ಕೈಯಲ್ಲಿ ನೇತಾಡುತ್ತಿತ್ತು. ಇತ್ತ ಏಕಬುದ್ಧಿ ಪಕ್ಕದ ಸಣ್ಣ ಕೊಳದಿಂದ ಇವೆಲ್ಲವನ್ನೂ ನೋಡಿ ಮರುಕ ಪಡುತ್ತಿತ್ತು.
--------------------------------------------------------------------------------------------------------------------------------------
ಏಕಾಬುದ್ಧಿರ್ಗರೀಯಸಿ ಎಂಬ ಈ ಕಥೆ ನಾನು ಎಂಟನೇ ತರಗತಿಯಲ್ಲಿದ್ದಾಗ ಪ್ರಥಮ ಭಾಷೆ ಸಂಸ್ಕೃತ ಪಠ್ಯದಲ್ಲಿ ಓದಿದ್ದೆ. ಕರೋನಾ ವೈರಸ್ ಅನ್ನೂ ಲಕ್ಷಿಸದೇ ಎನೂ ಆಗೋದಿಲ್ಲ ಎಂಬಂತೆ ಬೀದಿಗಳಲ್ಲಿ ತಿರುಗುವ ಜನರನ್ನು ನೋಡಿ ಮತ್ತೆ ಈ ಕಥೆ ನೆನಪಾಯಿತು..
good nice
ReplyDelete