ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂಗನಸುಗಳಲ್ಲಿ ಮೂಡಿದ ಮಸುಕಾದ ಚಿತ್ರಗಳಿಗೆ ರೇಖೆಗಳೆಳೆದು, ಬಣ್ಣ ತುಂಬಿ, ಮನಸ್ಸಿನಲ್ಲಿ ಅಚ್ಚೊತ್ತಿ, ಮುಂದಿನ ಕನಸಿನ ಮುನ್ನ ಮರೆತುಬಿಡುತ್ತಿದ್ದ ದಿನಗಳಲ್ಲಿ, ಮಸುಕಾಗದಂತೆ ಕಂಡವಳು ಅವಳು. ಮೂರು ವರ್ಷಗಳ ಸಹಪಾಠಿ. ಮೊದಲೆರಡು ವರ್ಷಗಳಲ್ಲಿ ದಿನವೂ ಕಂಡರೂ ಮುಖಕ್ಕೆ ಮುಖ ಕೊಟ್ಟು ನೋಡದಿದ್ದಷ್ಟು ವಿರಾಗಿಯವಳು. ಒಂದೆರಡು ವರ್ಷ ದೊಡ್ಡವರೆಲ್ಲಾ ಸೊಕ್ಕೆಂದುಕೊಳ್ಳುತ್ತಿದ್ದಷ್ಟು ಅಸಹನೀಯಳು. ಹಳ್ಳಿಗಳಲ್ಲಿ, ಅದರಲ್ಲೂ ಅನುದಾನಿತ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವ ಹುಡುಗರು ಹುಡುಗಿಯರನ್ನು ಕಂಡರೆ ದೂರ ಓಡುತ್ತಿದ್ದ ಸಮಯ. ಜೊತೆಯಿರುವ ಸಂಗಡಿಗರು ಛೇಡಿಸುತ್ತಾರೆಂದೋ, ಅಪ್ಪ ಮನೆಯಲ್ಲಿ ಗೊತ್ತಾದರೆ ಬಾರಿಸುತ್ತಾರೆಂದೋ, ಶಿಕ್ಷಕರಿಗೆ ತಿಳಿದರೆ ಅವಮಾನವೆಂದೋ ಹುಡುಗಿಯರಿಂದ ದೂರವೇ ಇರುವುದು ವಾಡಿಕೆ. ಅಪರೂಪಕ್ಕೊಮ್ಮೆ ನೋಟ್ಸ್ ಬೇಕಾದರೆ ಶಾಲೆಯಿಂದ ಹೊರಟಮೇಲೆ ದಾರಿಯಲ್ಲೋ, ಊಟದ ಸಮಯದಲ್ಲಿ ಕೈ ತೊಳೆಯುವಲ್ಲೋ, ಸ್ವಚ್ಛತಾ ಅವಧಿಯ ಕೊನೆಯಲ್ಲಿ ಅಂಗಳದ ಮೂಲೆಯಲ್ಲೆಲ್ಲೋ ನಿಂತು ಕೇಳುವಾಗ ಜೀವ ಕೈಗೆ ಬಂದಿರುತ್ತಿತ್ತು. ಎಲ್ಲಾ ಸವಾಲುಗಳನ್ನು ದಾಟಿ ನೋಟ್ಸ್ ತೆಗೆದುಕೊಂಡರೆ, ಪುನಃ ಕೊಡುವುದು ಮತ್ತೊಂದು ಯುದ್ಧ. ತರಗತಿಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಹೇಗೋ ಮಾಡಿ ಡೆಸ್ಕಿನ ಅಡಿಯಲ್ಲಿ ಇಟ್ಟುಬಿಟ್ಟರೆ ತಿರುಗಿ ಬಂದವರು ನೋಡಿ ಒಳಗಿಟ್ಟುಕೊಳ್ಳುತ್ತಿದ್ದರು. ಹಾಂ, ಮಧ್ಯದ ಪುಟದಲ್ಲೊಂದು 'Thank you :)' ಚೀಟಿ ಇಟ್ಟಿರಲು ಮರೆಯುತ್ತಿರಲಿಲ್ಲ. ಎಲ್ಲಾ ಹರೆಯದ ಹುಡುಗರ ನಿತ್ಯದ ಗೋಳಾದ ಇಂತಹ ದಿನಗಳಲ್ಲಿ, ಎಸ್ಸೆಸ್ಸೆಲ್ಸಿ ಪ್ರಾರಂಭದ ದಿನಗಳಲ್ಲಿ ಅತಿಯಾಗಿ ಆಕರ್ಷಿಸಿದ ಕಣ್ ಸೆಳೆತ ಅವಳದೊಂದೆ! ಅವಳೆಡೆಗೆ ಮನಸ್ಸಿನಲ್ಲಾದ ಈ ತಳಮಳದ ಭಾವನೆಗಳಿಗೆ ಕಾರಣ ಹುಡುಕುವ ಗೋಜಿಗೆ ಹೋಗದಿದ್ದದ್ದೇ ಈ ಅಕ್ಷರಗಳಿಗೆ ಕಾರಣವಿದ್ದಿರಬಹುದು.
ಹದಿನೈದು ಮುಗಿದು ಹದಿನಾರು ತುಂದಿದ ವಯಸ್ಸಿನಲ್ಲಿ ಮನಸ್ಸು ಲಂಗು ಲಗಾಮಿಲ್ಲದೇ ಹರಿದಾಡುತ್ತಿರುತ್ತದೆ. ಅನುಭವಿಸಿದ್ದೇನೆ. ಆ ವಯಸ್ಸೇ ಹಾಗೆ. ಟೀವಿಯಲ್ಲೆಲ್ಲೋ ಛಂದದ್ದೊಂದು ನಡು ಕಾಣುವ ಸೀರೆಯುಟ್ಟು ಬರುವ ಸಿನಿಮಾ ನಟಿಗೋ, ಬಿಏಡ್ ಮುಗಿಸಿ ಆಗ ತಾನೇ ಕೆಲಸಕ್ಕೆ ಸೇರಿದ ಹೊಸ ಟೀಚರಿಗೋ, ಸಣ್ಣವರಿದ್ದಾಗಿಂದಲೂ ಜೊತೆಗೇ ಆಡಿದ ಅತ್ತೆಯ ಮಗಳ ಸೌಂದರ್ಯಕ್ಕೋ, ಮನಸ್ಸು ಸೋತುಬಿಡುತ್ತದೆ. ವಿರಹ, ಪ್ರೇಮಗೀತೆಗಳಿಗೆ ತಲೆದೂಗುವ ಅಭ್ಯಾಸವೇ ಅಂಟಿರುತ್ತದೆ. ಶಾಲೆಯಿಂದ ಹೊರಡುವಾಗ ಅವಳ್ಯಾರೋ ಅವನ್ಯಾವನ ಜೊತೆಯಲ್ಲೋ ಅಲ್ಲೆಲ್ಲೋ ನಡೆದು ಹೋದ ಸುದ್ದಿ ಗೊತ್ತಾದರೆ, ಛೆ ನಾನಂತೂ ಒಂಟಿ ಎನ್ನಿಸುವಷ್ಟು ಖೇದವಾಗುತ್ತದೆ. ಅಂತಹುದೇ ಸಮಯದ ಪರಿಧಿಯೊಳಗೆ ಕಳೆದುಹೋದ ಸಂದಿಗ್ಧ ಪರಿಸ್ಥಿತಿಯದು. ‘ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು..’ ಹಾಡನ್ನು ದಿನಕ್ಕೆರಡುಬಾರಿಯಾದರೂ ಗುನುಗುತ್ತಿದ್ದೆ. ಮೈಸೂರು ಮಲ್ಲಿಗೆಯ ಸಾಲುಗಳು ಎಷ್ಟು ಆವರಿಸಿಕೊಂಡಿದ್ದವೆಂದರೆ, ಪ್ರತಿ ಅಕ್ಷರದ ಭಾವಗಳೂ ನನ್ನವೇ ಆಗಿಬಿಟ್ಟಿದ್ದವು. ಆ ಕ್ಷಣಗಳನ್ನು ಇನ್ನಷ್ಟು ಭಾವುಕಗೊಳಿಸಲೆಂಬಂತೆ ಹೃದಯದ ಗೋಡೆಯ ಮೇಲೆ ಛಾಪಿಸಿಕೊಂಡವಳು ಅವಳು. ಶಾಲೆಯಿಂದ ಮನೆಗಿದ್ದ ಒಂದು ಮೈಲಿಯ ದೂರವನ್ನು ನೆನಪುಗಳಲ್ಲೇ ಹತ್ತಿರವಾಗಿಸಿಕೊಂಡವಳು. ಗಣಿತ ಪುಸ್ತಕದ ಹಿಂಭಾಗದಲ್ಲೆಲ್ಲೋ ಹೆಸರಿನ ಮೊದಲಕ್ಷರದ ಚಿಹ್ನೆಯಾದವಳು. ಡೆಸ್ಕಿನ ಮೇಲೆ ತ್ರಿಜ್ಯದ ಚೂಪಾದ ಮೊನೆಯಿಂದ ಕೆತ್ತಿದ ಮೊದಲ ಹೆಸರವಳು. ಕೊಠಡಿ ಬದಲಾದರೂ ಅದೇ ಡೆಸ್ಕನ್ನು ಹುಡುಕಿ ತಂದುಕೊಳ್ಳುವಷ್ಟು ಚಟವಾಗಿಹೋದವಳು. ಮುಸ್ಸಂಜೆಯಲ್ಲೆಲ್ಲೋ ರಸ್ತೆಯಂಚಿನಲ್ಲಿ ನಡೆಯುವಾಗ ಪಕ್ಕವೇ ಬಂದಂತೆ ಅನ್ನಿಸುವಷ್ಟು ಅಮಲು. ಇಷ್ಟಾದರೂ ಮಾತಿಲ್ಲದೇ ಕಥೆಯಿಲ್ಲದೇ ನೋಡುವಷ್ಟು ಮಾತ್ರ ಹತ್ತಿರವಾದವಳು.
ಮೂರೂರಿನ ಮಳೆಗಾಲದ ದಾರಿಗಳು ನಡೆಯಲು ಕಷ್ಟ. ಬೇರೆ ಕಾಲದಲ್ಲಿ ಸೈಕಲ್ ತುಳಿದು ಶಾಲೆಗೆ ಹೋಗುವ ನಮಗೆ, ಮಳೆಗಾಲದಲ್ಲಿ ಸೈಕಲ್ ಚಕ್ರಕ್ಕೆ ಜಂಗು ಹಿಡಿಸುವುದೊಂದೇ ದಾರಿ. ಧೋ ಎಂದು ಸುರಿಯುವ ಮಳೆಯ ನಡುವೆ ದಿನಕರಣ್ಣನ ಅಂಗಡಿಯ ಹೆಸರಿಲ್ಲದ ಕೊಡೆ ಹಿಡಿದು ಆಚೀಚೆ ಸಿಡಿಯುವ ನೀರಿನ ಹನಿಗಳು ತಿಳಿಹಳದಿ ಬಣ್ಣದ ಅಂಗಿಗೆ ತಾಗದಂತೆ ನಡೆದರೆ ಮಾತ್ರ ಶಾಲೆಯಲ್ಲಿ ನೆಮ್ಮದಿಯ ಪಾಠ. ಸಣ್ಣ ಭಾಗ ಒದ್ದೆಯಾದರೂ ಹೊರಗಿನ ಮಳೆಗೆ ಒಳಗೆಲ್ಲಾ ಚಳಿ ಹಿಡಿದುಬಿಡುತ್ತದೆ. ಇದ್ಯಾವುದರ ಪರಿವೆಯಿಲ್ಲದೇ ನಡೆದು ಒದ್ದೆ ಅಂಗಿಯಲ್ಲಿಯೇ ಕೂತು, ಮೊಳ ಮಲ್ಲಿಗೆ ಮುಡಿದ ಅವಳ ಜಡೆಯನ್ನೇ ನೋಡುತ್ತಾ ಆರು ತಿಂಗಳಷ್ಟು ಸಮಯ ಕಳೆದುಬಿಟ್ಟಿದ್ದೇನೆ. ಹಾಂ! ನಮ್ಮಲ್ಲಿ ಆರು ತಿಂಗಳು ಮಳೆ ಬಿಡುವುದಿಲ್ಲವೆನ್ನಿ. ತರಗತಿಯ ಹೊರಗೆ, ಕೊಡೆ ತೂಗುಹಾಕುವ ಜಾಗದಲ್ಲಿ, ಅವಳ ಬಣ್ಣದ ಮೂರು ಮಡಿಕೆಯ ಕೊಡೆಯನ್ನು ಹುಡುಕುವುದು ಮೊದಲ ನಾಲ್ಕು ದಿನ ಮಾತ್ರ ಕಷ್ಟದ ಕೆಲಸವಾಗಿದ್ದಿತು. ನಂತರದ ದಿನಗಳಲ್ಲಿ ಅವಳ ಕೊಡೆಯ ಪಕ್ಕವೇ ನನ್ನ ಕೊಡೆಗೊಂದು ಖಾಯಂ ಜಾಗ ಕಂಡುಕೊಂಡಾಗಿತ್ತು. ಮನೆಗೆ ಹೊರಡುವಾಗ ಕೊಡೆ ತೆಗೆಯುವ ನೆಪದಲ್ಲಾದರು ಪಕ್ಕ ನಿಂತು ಒಂದು ನಗು ಬೀರಿ ಆ ಅಮಲಿನಲ್ಲೇ ಮನೆಗೆ ಹೊರಡುವುದು ದಿನಚರಿಯಾಯಿತು. ಮಾತು ಮಾತ್ರ ಗಂಟಲಿನಲ್ಲೇ ಅವಿತು ಕುಳಿತಿತ್ತು.
ಕಂಡಕೂಡಲೇ ಮುಖ ತಿರುಗಿಸುವಷ್ಟು ವೈರಾಗ್ಯದಿಂದ, ಕಣ್ಣಲ್ಲೊಮ್ಮೆ ಕಣ್ಣಿಟ್ಟು ನೋಡಿ ನಾಚಿಕೆಯಿಂದ ದೃಷ್ಟಿ ಬದಲಾಯಿಸುವಲ್ಲಿಗೆ ನಮ್ಮ ಸಂಬಂಧ ಬಂದು ನಿಲ್ಲುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಂದೇವಾರ ಬಾಕಿ. ಆರು ತಿಂಗಳಿನಿಂದ ಈ ಏಕಾಂಕ ನಾಟಕವನ್ನು ಜೊತೆಯಿದ್ದೇ ನೋಡುತ್ತಿದ್ದ ಖಾಸಗೀ ಗೆಳೆಯ, ಮನಸ್ಸಿನ ಭಾವನೆಗಳನ್ನು ಅವಳಿಗೆ ಹೇಳಲು ಒತ್ತಾಯಿಸುತ್ತಿದ್ದ ಏಕೈಕ ಹಿತೈಷಿ. ಮಾತನಾಡಲೂ ಹೆದರುವ ನಾನು ಹರೆಯದ ಹುಮ್ಮಸ್ಸಿನಲ್ಲಿ ಇತಿಹಾಸದ ಪಟ್ಟಿಯ ಕೊನೆಯ ಹಾಳೆಯಲ್ಲಿ ಬರೆದ ಪ್ರೇಮ ಕವಿತೆಯೊಂದನ್ನು ಹರಿದು ಅವಳ ಕನ್ನಡ ಪುಸ್ತಕದೊಳಗೆ ಸೇರಿಸಿಬಿಟ್ಟಿದ್ದ. ಕದಂಬ ಮಯೂರ, ಪಲ್ಲವರ ಮೇಲೆ ರಾಜ್ಯ ಗೆದ್ದಂತೆ ಸಂಭ್ರಮಿಸಿ ಹೇಳಿದ್ದ. ನನಗಾದರೋ ಆ ರಾತ್ರಿಯಿಡೀ ನಿದ್ದೆಯಿಲ್ಲ. ಯಾರಾದರೂ ನೋಡಿದರೆ ನಾಚಿಕೆಗೇಡು. ಇಲ್ಲಾ ಅವಳೇ ಬಂದು ಬಾಯ್ತುಂಬಾ ಬಯ್ದರೂ, ಸಹಿಸಿಕೊಳ್ಳುವ ವ್ಯವಧಾನವಿರುವ ಯಾವ ಖಾತ್ರಿಯೂ ಇಲ್ಲ. ಮರುದಿವಸ ಬೆಳಿಗ್ಗೆ ಧ್ಯಾನದ ಅವಧಿ ಮುಗಿದಮೇಲೆ ಬಂದು 'ಹಿಡಿ, ನಿನ್ನ ಕವಿತೆ' ಎಂದು ಕೈಗೆ ಅದೇ ಹಾಳೆಯನ್ನು ಕೊಟ್ಟು ಹೊರಟು, ಹಿಂದೆ ತಿರುಗಿ ತುಟಿಯಲ್ಲಿ ಚಂದದ್ದೊಂದು ನಗು ತೋರಿಸಿ ಗಂಭೀರಳಾದದ್ದು ಬಿಟ್ಟರೆ, ಬೇರೇನು ನೆನಪಿಲ್ಲ. ಸಹಪಾಠಿಗಳೆಲ್ಲ ಗಣಿತದ ಲೆಕ್ಕ ಬಿಡಿಸಲೆಂದೋ, ಇತಿಹಾಸದ ಚರ್ಚೆಗೆಂದೋ, ಹರಟೆಗೆಂದೋ ನನ್ನೊಡನೆ ಗಂಟೆಗಟ್ಟಲೆ ಜೊತೆಯಿರುವಾಗ, ಇವಳೊಬ್ಬಳು ಯಾಕೆ ಮೌನಿಯಾಗುತ್ತಾಳೆ ಎಂದು ತಿಳಿಯದೇ ಬಹಳಷ್ಟು ಬಾರಿ ಮಾತಿಗಾಗಿ ಹಂಬಲಿಸಿದ್ದಿದೆ. ಈ ಕವಿತೆಯ ಪ್ರಸಂಗದ ಬಳಿಕ ಅವಳಿಗೂ ಏನೋ ಗೊತ್ತಾದಂತಾಗಿ ಮಾತುಕತೆ ಪ್ರಾರಂಭವಾದದ್ದೊಂದೇ ಲಾಭ, ಸಮಯ ಸರಿಯುತ್ತಿದ್ದ ಪರಿವೆಯಿರಲಿಲ್ಲ. ಪರೀಕ್ಷೆಯ ಕೊನೆಯ ವಾರಗಳಲ್ಲಿ ಶಾಲೆಯ ವಿಷಯವೊಂದನ್ನು ಬಿಟ್ಟು ಬಹಳಷ್ಟು ಮಾತನಾಡಿದ್ದಾಳೆ. ಯಾರದೋ ಮನೆಯ ಮದುವೆಯ ವಿಷಯದಿಂದ ಹಿಡಿದು ಅವಳದೇ ಮಾವ ಸಾಲ ತೀರಿಸಲಾಗದೇ ಸತ್ತ ವಿಷಯದ ತನಕ; ಮನದೊಳಗಿನ ಭಾವನೆಯೊಂದನ್ನು ಬಿಟ್ಟು.
ಕೊನೆಗೂ ಬರಬಾರದೆಂದೆಣಿಸುತ್ತಿದ್ದ ಸಮಯ ಬಂದಾಗಿತ್ತು. ಶಾಲೆಯ ಮೆಟ್ಟೀಲಿಳಿದು, ಕಾಲೇಜಿನ ಬಿಗುಮಾನವನ್ನು ಊರಿಗೆಲ್ಲಾ ತೋರಿಸುವ ಪ್ರಸ್ತಾವನೆಯ ಸಮಯ ಹತ್ತಿರವಾಗಿತ್ತು. ಕೊನೆಯ ಪರೀಕ್ಷೆಯ ಕೊನೆಯದಿನ, ಗಣಿತ ಪರೀಕ್ಷೆ ಮುಗಿಸಿ ಶಾಲೆಯ ಗೇಟಿನೆದುರು ಸಿಕ್ಕವಳು ಮಂದ ಮುಖದಿಂದಲೇ 'ಇನ್ನೇನಾದರೂ ಹೇಳುವುದಿದ್ದಾ?' ಎಂದಿದ್ದಳು. ಇಂಥದ್ದನ್ನೆಲ್ಲಾ ಎದುರುಗಾಣದವನಾಗಿದ್ದ ನನಗೆ ಮಾತು ಹೊರಡಲಿಲ್ಲ. 'ಇನ್ನೇನು, ಶಾಲೆ ಮುಗೀತು' ಅಂದೆ. ಹೌದು ಎಂದು, ಸಣ್ಣ ನಗೆಯಾಡಿ, ಸಮಯ ಕೂಡಿ ಬಂದರೆ ಸಿಗುವ ಎಂದು ಹೊರಟೇ ಬಿಟ್ಟಳು, ಆದರೆ ಈ ಬಾರಿ ಹಿಂತಿರುಗಲಿಲ್ಲ. ಹಿಂತಿರುಗಿದ್ದರೆ ಅವಳ ಹಿಂದೆ ಓಡಿ ಸ್ವಲ್ಪ ದೂರ ಅವಳೊಡನೆ ನಡೆದು, ಮನಸ್ಸಿನ ಮಾತಿನ ಸುಳಿವು ಕೊಡುತ್ತಿದ್ದೆನೇನೋ ಎಂದು ಈಗೀಗ ಅನ್ನಿಸಿದ್ದಿದೆ. ಆದರೆ ಅವಳು ಮತ್ತೆ ವಿರಾಗಿಯಾಗಿ ನಡೆದುಬಿಟ್ಟಳು. ಅದೇ ಕೊನೆ. ಮತ್ತೆ ಅವಳನ್ನು ನೋಡುವ ಕಾಲ ಕೂಡಿ ಬರಲೇ ಇಲ್ಲ.
ಹರೆಯದ ಪ್ರೀತಿಯೇ ಹಾಗೆ, ಕಾರಣವಿಲ್ಲದೇ ಮೈಮರೆಸುತ್ತದೇ. ಕಾರಣವಿಲ್ಲದೇ ನೋಯಿಸುತ್ತದೆ. ಕಾರಣವಿಲ್ಲದೇ ಹುಟ್ಟಿದ ಮೊದಲ ಪ್ರೀತಿ, ಕೊನೆಯವರೆಗೂ ನೆನಪಾಗುತ್ತದೆ. ಅವಳಿಲ್ಲದ ಇಷ್ಟು ವರ್ಷಗಳಲ್ಲಿ ನಾನೇನೂ ಮಾಡಿಯೇ ಇಲ್ಲವೆಂದೇನಿಲ್ಲ. ಮೊದಲಿನಂತೆ ಬರೆಯುತ್ತೇನೆ. ದಿನಚರಿಯೆಲ್ಲವೂ ಮಾಮೂಲಾಗಿದೆ. ಹೊಸ ಹೊಸ ಗೆಳೆಯರಿದ್ದಾರೆ. ಸ್ನೇಹಿತೆಯರೊಟ್ಟಿಗೆ ಧಾರಾಳವಾಗಿಯೇ ಮಾತನಾಡುತ್ತೇನೆ. ಹೊಸ ಜೀವನ ರೂಪಾಗಿದೆ. ಹೊಸ ನಗರಕ್ಕೆ, ಸ್ವತಂತ್ರ ಜೀವನಕ್ಕೆ ಹೊಂದಿಕೊಂಡಿದ್ದೇನೆ. ಕೊರತೆಯೇನಿಲ್ಲ. ಆದರೂ ರಸ್ತೆಯಲ್ಲಿ ಒಬ್ಬಂಟಿಯಾಗಿ ನಡೆಯುವಾಗ, ಮಳೆಗಾಲದಲ್ಲಿ ಕೊಡೆ ಬಿಚ್ಚಿ ಹರಡುವಾಗ, ಪೇಟೆಯಲ್ಲಿ ಮಾರುದ್ದದ ಮಲ್ಲಿಗೆಯ ದಂಡೆ ಕಂಡಾಗಲೆಲ್ಲಾ ನೆನಪಾಗುತ್ತಾಳೆ.. ಮಾತಾಗುತ್ತಾಳೆ.!!!
-ಶಿವಪ್ರಸಾದ ಭಟ್ಟ
(16-10-2016 - Insignia ವಾರ್ಷಿಕ ಪತ್ರಿಕೆಗಾಗಿ)