Sunday, July 31, 2016

ಪಯಣ

 











ಸಂಜೆಗತ್ತಲ ಬಾನ ಚುಕ್ಕಿಗೆ
ಮಿಂಚಿ ಮಿನುಗುವ ಕಾತರ
ಮುಗಿಲು ಮುತ್ತಿಹ ಕಾರು ಮೋಡಕೆ
ಶಶಿಯ ಮರೆಸುವ ಆತುರ

ಗೂಡು ಸೇರುವ ಖಗಮಹೋತ್ಸವ
ನಭಕೆ ಮಾಲೆಯ ತೋರಣ
ಗಗನ ಹೆಗಲಿಗೆ ನೊಗವ ನೀಡುವ
ಹಾದಿ ಕನಸಿನ ಚಾರಣ

ಮಸುಕು ಹಾದಿಯ ಹೆಜ್ಜೆಗುರುತಿಗೂ
ದಾರಿ ತಿಳಿಸುವ ಸಂಭ್ರಮ
ಪಾದ ಮೆತ್ತಿಹ ಧೂಳ ಸುತ್ತಲೂ
ಕನಸಿನುಸುಕಿನ ಸಂಗಮ

ಹೀಗೆ ಬಂದು ಹಾಗೆ ಹೋಗುವ
ಮಿಂಚು ತೋರೀತೇ ಹಾದಿಯ
ಗುಡುಗು ನಡುಗಿಸೋ ಕವಲು ಕತ್ತಲೆ
ಜೀವ ಜಾತ್ರೆಗೆ ನಿರ್ಭಯ

ಗಮ್ಯ ಸೇರುವ ರಮ್ಯ ಹಂಬಲ
ಸ್ಫುರಣ ದುಂದುಭಿ ಕಲ್ಪನೆ
ಭವ ದಿಗಂತದಿ ನವನವೋದಯ
ಪಯಣ ಮುಗಿಯದ ಭಾವನೆ..

                       -ಶಿವಪ್ರಸಾದ ಭಟ್ಟ

ದೇವಯಾನಿ

ಸೂರ್ಯಾಸ್ತ ಸಮೀಪಿಸುತ್ತಿತ್ತು. ಕಚ ಶುಕ್ರಾಚಾರ್ಯರ ಆಶ್ರಮದೆದುರು ನಿಂತಿದ್ದ. ತಂದೆಯನ್ನು ಕೂಗಿ ಒಳಗೋಡಿದ ದೇವಯಾನಿಯ ಮಂಪರಿನಲ್ಲಿ ತೇಲಿ ನಿಂತಿದ್ದ. ಅಮರಾವತಿಯಿಂದ ದಾನವ ಗುರುವಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬಂದವ ದೇವಯಾನಿಯಲ್ಲಿ ಮೋಹಿತನಾಗಿದ್ದ. ಗುರುವನ್ನರಸಿಬಂದವನಿಗೆ ಗುರುಪುತ್ರಿಯ ಸೆಳೆತ ಬಲವಾಗಿ ಬೇರೂರಿತು. ತಂದೆಯನ್ನು ಕೂಗಿ ಒಳನಡೆದವಳ ಸುಳಿವೂ ಸಿಗಲಿಲ್ಲ. ಸುಮ್ಮನೇ ಯೋಚಿಸುತ್ತಾ ನಿಂತ. ಮನಸ್ಸಿನ ಮೂಲೆಯಲ್ಲಿ ದೇವಯಾನಿಯ ಗುಂಗು ಕಾಡತೊಡಗಿತು.
ಕಚ ಸಾಮಾನ್ಯನಲ್ಲ. ದೇವಾಂಶ ಸಂಭೂತ. ಸ್ಫುರದ್ರೂಪಿ. ಬೃಹಸ್ಪತಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಕಲಿತವನು. ಆದರೆ ದೇವಗುರುವನ್ನು ಬಿಟ್ಟು ದಾನವ ಗುರು ಶುಕ್ರಾಚಾರ್ಯರಲ್ಲಿ ವಿದ್ಯೆ ಕಲಿಯುವ ಆದೇಶ ಅಮರಾಧಿಪನಿಂದ ಯಾಕೆ ಬಂತೋ ತಿಳಿದಿರಲಿಲ್ಲ. ಶುಕ್ರಾಚಾರ್ಯರಿಗೆ ಅಸುರರೊಡನೆ ಇದ್ದು ರಾಕ್ಷಸೀ ಪ್ರವೃತ್ತಿ ಮೈಗೂಡಿದೆಯೆಂದು ಕೇಳಿದ್ದ ಕಚ. ಇಂಥಾ ಸಿಡುಕನಲ್ಲಿ ಒಬ್ಬ ಸಾಧಾರಣ ಬ್ರಾಹ್ಮಣಕುಮಾರನಂತೆ ವಿದ್ಯೆ ಕಲಿಯುವ ಅವಶ್ಯಕತೆ ಏನೆಂದು ಅರ್ಥವಾಗಿರಲಿಲ್ಲ. ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳು ತೂರಾಡುತಿದ್ದವು. ಉತ್ತರಕ್ಕಾಗಿ ಹಪಹಪಿಸುತ್ತಿದ್ದವು.

ದಿನಗಳುರುಳುತ್ತಿದ್ದವು. ಕಚ ಅಮರಾವತಿಯಿಂದ ಬಂದ ಸಂದೇಶದ ಬಗ್ಗೆ ಚಿಂತಿತನಾಗಿದ್ದ. ಕೆಲವು ದಿನಗಳ ಹಿಂದೆ ಇಂದ್ರ ಸ್ಪಷ್ಟ ಸಂದೇಶ ಕಳುಹಿಸಿದ್ದ. "ಮೃತಸಂಜೀವಿನಿ." ದಾನವ ಗುರು ಶುಕ್ರಾಚಾರ್ಯನಿಗೆ ಮಾತ್ರ ತಿಳಿದ ಸತ್ತವರನ್ನು ಬದುಕಿಸುವ ವಿದ್ಯೆ. ಇದರಿಂದಲೇ ದಾನವರು ಮೆರೆಯುತ್ತಿದ್ದುದು. ಅದು ದೇವತೆಗಳಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಮೋಸದಿಂದ ಕಚನನ್ನು ವಿದ್ಯೆ ಕಲಿಯಲು ಕಳುಹಿಸಿದ್ದ. ಆದರೆ ಕಚ ದ್ವಂದ್ವದಲ್ಲಿ ಸಿಲುಕಿದ್ದ. ಗುರು ಕಲಿಸಿದ್ದನ್ನು ಕಲಿಯುವುದು ಸಂಸ್ಕೃತಿ. ಕಲಿಕೆಯ ಬೇಡಿಕೆಯನ್ನು ಗುರುವಿನ ಮುಂದಿಡುವುದು ಸರಿಯಲ್ಲ. ಸಮಯಕಾಗಿ ಕಾಯುತ್ತಿದ್ದ. ಆದರೆ ದೇವಯಾನಿಯ ಪ್ರೀತಿಯೂ ಹೆಚ್ಚಾಯಿತು..
ಕಚನೇನೋ ಶೃಧ್ಧೆಯಿಂದ ಎಲ್ಲಾ ವಿದ್ಯೆಗಳನ್ನು ಕಲಿಯತೊಡಗಿದ್ದ. ಆದರೆ ಇಡೀ ಅಸುರಕುಲ ಅವನನ್ನು ಕಂಡು ಅಸೂಯೆ ಪಡುತ್ತಿತ್ತು. ಯಾವನೋ ಬ್ರಾಹ್ಮಣಕುಮಾರನೆಂದು ಬಂದ ತಕ್ಷಣ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದ್ದಕ್ಕೆ ಅವನನ್ನು ಕೆಂಗಣ್ಣಿನಿಂದ ನೋಡುತ್ತಿತ್ತು. ದೇವಯಾನಿಯ ಜೊತೆ ಇರುವ ಎಲ್ಲಾ ಸಮಯದಲ್ಲೂ ಕೊಲ್ಲುವ ಹಾಗೆ ಭಾಸವಾಗುತ್ತಿತ್ತು. ಸಮಯಕ್ಕಾಗಿ ಕಾದು ಕುಳಿತವರಂತೆ ಕಾಣುತ್ತಿದ್ದರು ಅಸುರರು. ಬೃಹಸ್ಪತಿ ಮೊದಲೇ ಎಚ್ಚರಿಕೆ ನೀಡಿದ್ದರು. ಅಸುರಕುಲ ಕಚನನ್ನು ನಾಶ ಮಾಡಬಹುದೆಂದು. ಎಲ್ಲದಕ್ಕೂ ಸಿದ್ಧನಿದ್ದ ಕಚ.. ದೇವಯಾನಿಗಾಗಿ..


ಸಂಜೆಯಾಗುತ್ತಿತ್ತು. ಕಚ ಉರುವಲಿಗಾಗಿ ಕಾಡಿಗೆ ಹೋದವ ಹಿಂದಿರುಗಲಿಲ್ಲ. ದೇವಯಾನಿಯ ಮನಸ್ಸು ಭಯದಿಂದ ಕಂಪಿಸುತ್ತಿತ್ತು. ಕಚ ಎಲ್ಲಿರಬಹುದೆಂದು ತವಕಿಸುತ್ತಿತ್ತು. ತಂದೆಯಲ್ಲಿ ತನ್ನ ಸಂಕಟ ಹೇಳಿದಳು. ಇಬ್ಬರೂ ಕಚನನ್ನು ಹುಡುಕಹೊರಟಾಗ ಸೂರ್ಯ ತನ್ನ ಕೆಲಸಮುಗಿಸಿ ಹೊರಡಲು ಸಜ್ಜಾಗಿದ್ದ. "ಕಚ..!ಎಲ್ಲಿರುವೆ ಮಗೂ?" ಶುಕ್ರಾಚಾರ್ಯರು ಕಾಡಿನ ದಾರಿಯಲ್ಲಿ ನಿಂತು ಕೂಗಿದಾಗ ಸೂರ್ಯ ಸರಿಸುಮಾರು ಮರೆಯಾಗಿದ್ದ. "ನಾನಿಲ್ಲಿ ತೋಳಗಳ ಹೊಟ್ಟೆಯಲ್ಲಿದ್ದೇನೆ ಗುರುದೇವಾ" ಕಚನ ಧ್ವನಿ ಸ್ಪಷ್ಟವಾಗಿತ್ತು. ದೇವಯಾನಿ ಅತ್ತಳು. ಅವಳ ಎಣಿಕೆ ನಿಜವಾಗಿತ್ತು. ಅವನಲ್ಲಿ ಅಸೂಯೆ ಹೊಂದಿದ್ದ ಯಾರೋ ಅವನನ್ನು ಕೊಂದು ತೋಳಗಳಿಗೆ ಹಂಚಿದ್ದರು. ಶುಕ್ರಾಚಾರ್ಯ ಮಗಳಿಗೆ ಸಮಾಧಾನ ಹೇಳಿ, ಮೃತ ಸಂಜೀವಿನಿ ಪಠಿಸಿದರು. ಕಚನನ್ನು ಕರೆದರು. ಏನೂ ಆಗದವನಂತೆ ಕಾಡಿನ ಮಧ್ಯದಿಂದ ಎದ್ದು ಬಂದ ಕಚ.

ಕೆಲದಿನಗಳು ಕಳೆಯಿತು. ಮತ್ತೆ ಒಂದು ಸಂಜೆ ಕಚ ಹಿಂದಿರುಗಲಿಲ್ಲ. ದೇವಯಾನಿ ಮತ್ತೆ ಕಣ್ಣೀರಾದಳು. ಶುಕ್ರಾಚಾರ್ಯರೊಂದಿಗೆ ಮತ್ತೆ ಕಚನನ್ನು ಹುಡುಕಹೊರಟಳು. "ಕಚ..!ಎಲ್ಲಿದ್ದೀಯಾ ಮಗೂ?" ಶುಕ್ರಾಚಾರ್ಯರ ಕರೆ ಮರುಧ್ವನಿಸಿತು. "ಪ್ರಪಾತದಲ್ಲಿರುವೆ ಗುರುಗಳೇ" ಕಚ ಉತ್ತರಿಸಿದ. ಶುಕ್ರಾಚಾರ್ಯರ ನಿರೀಕ್ಷೆ ನಿಜವಾಗಿತ್ತು. ತೋಳಗಳ ಬಾಯಿಂದ ಬದುಕಿ ಬಂದ ಕಚನನ್ನು ಮತ್ತೆ ಕೊಂದು ಪ್ರಪಾತಕ್ಕೆ ಎಸೆದಿದ್ದರು. ದೇವಯಾನಿಯ ಮನಸು ಛಿದ್ರವಾಯಿತು. ಮಗಳನ್ನು ಸಮಾಧಾನಿಸಿ ಮತ್ತೆ ಮೃತ ಸಂಜೀವಿನಿ ಪಠಿಸಿದರು, ಕಚನನ್ನು ಕರೆದರು. ಏನೂ ಆಗದವನಂತೆ ಕಚ ಪ್ರಪಾತದಿಂದ ಮೇಲೆದ್ದು ಬಂದ. ಮೂವರೂ ಆಶ್ರಮಕ್ಕೆ ಮರಳಿದರು.

ತಿಂಗಳನಂತರ ಮತ್ತದೇ ಘಟಿಸಿತು. ಕಚ ಮತ್ತೆ ಕಣ್ಮರೆಯಾದ. ಶುಕ್ರಾಚಾರ್ಯರು ಶಿಷ್ಯರ ಮೇಲೆ ಸಿಟ್ಟಾದರು. ದೇವಯಾನಿ ಆಹಾರ ತ್ಯಜಿಸಿದಳು. ಎಲ್ಲಾ ಕಡೆ ಹುಡುಕಿದರು, ಕಚ ಸಿಗಲಿಲ್ಲ. ಕಾಡಿನ ಮಧ್ಯದಲ್ಲಿ, ನದಿಯ ದಡದಲ್ಲಿ ಎಲ್ಲೂ ಕಚನ ಸುಳಿವಿಲ್ಲ. ಕಚನನ್ನು ಮತ್ತೆ ಕರೆದರು ಗುರುಗಳು. "ಕಚ..!ಎಲ್ಲಿರುವೆ ಮಗೂ.."
"ಇಲ್ಲೇ ನಿಮ್ಮ ಹೊಟ್ಟೆಯಲ್ಲಿದ್ದೇನೆ ಗುರುದೇವಾ" ಉತ್ತರ ಕೇಳಿ ಎದೆ ನಡುಗಿತು ಶುಕ್ರಾಚಾರ್ಯರಿಗೆ. ಅಂದರೆ ಮಧ್ಯಾಹ್ನದ ಊಟದಲ್ಲಿ ಗಂಜಿಯಲ್ಲಿ ಸೇವಿಸಿದ್ದು ಅನ್ನವಲ್ಲ. ಕಚನ ಅಸ್ಥಿ.!ತಾನು ಕಚನನ್ನು ಬದುಕಿಸುತ್ತೇನೆಂದು ತಿಳಿದು ಕಚನನ್ನು ಕೊಂದು ಅಸ್ಥಿಯನ್ನು ಊಟದಲ್ಲಿ ನೀಡಿದ್ದಾರೆ ನನಗೆ. ಅಸಹ್ಯವೆನಿಸಿತು ಶಿಷ್ಯರ ಮೇಲೆ. ದಾರಿ ತೋಚಲಿಲ್ಲ. ದೇವಯಾನಿ ಪ್ರಿಯಕರನ ಜೀವಕ್ಕಾಗಿ ಪರಿತಪಿಸುತ್ತಿದ್ದಳು. ಹಂಬಲಿಸುತ್ತಿದ್ದಳು. ಶುಕ್ರಾಚಾರ್ಯರು ಚಿಂತಿಸಿ ಹೇಳಿದರು "ಕಚ, ನಾನೀಗ ನಿನಗೆ ಮೃತ ಸಂಜೀವಿನಿ ಮಂತ್ರೋಪದೇಶ ನೀಡುತ್ತೇನೆ. ಸಮಯ ಬಂದಾಗ ಉಪಯೋಗಿಸು". "ಅಪ್ಪಣೆ ಗುರುದೇವಾ" ಉತ್ತರಿಸಿದ ಕಚ. ಉಪದೇಶ ನೀಡಿ ಕಚನನ್ನು ಕರೆದರು ಆಚಾರ್ಯರು. ಕಚ ಶುಕ್ರಾಚಾರ್ಯರ ಹೊಟ್ಟೆಸೀಳಿ ಹೊರಬಂದ. ಶುಕ್ರಾಚಾರ್ಯರು ಹೆಣವಾಗಿ ಬಿದ್ದಿದ್ದರು. ಇಡೀ ಅಸುರ ಕುಲ ತಲ್ಲಣವಾಯಿತು. ಪ್ರಿಯಕರನ ಬದುಕಿಗೆ ಸಂಭ್ರಮಿಸಬೇಕೋ ತಂದೆಯ ಸಾವಿಗೆ ದುಃಖಿಸಬೇಕೋ ತಿಳಿಯಲಿಲ್ಲ ದೇವಯಾನಿಗೆ.
ಕಚ ಅವಳನ್ನು ಸಮಾಧಾನಿಸಿ ಮತ್ತೆ ಮೃತಸಂಜೀವಿನಿ ಪಠಿಸಿದ. ಶುಕ್ರಾಚಾರ್ಯರು ಕಣ್ಣು ತೆರೆದರು. ಶಿಷ್ಯನ ಪಾಂಡಿತ್ಯಕ್ಕೆ ತಲೆದೂಗಿದರು. ಕಚನಿಗೆ ಮೃತಸಂಜೀವಿನಿ ವಿದ್ಯೆ ಕಲಿತ ಹೆಮ್ಮೆ ಮೂಡಿತ್ತು. ದೇವಯಾನಿ ಕಚನನ್ನು ಪಡೆದ ಪ್ರೀತಿಯಲ್ಲಿದ್ದಳು. ಗುರುವಿನ ಅನುಮತಿ ಪಡೆದು ಕಚ ದೇವಯಾನಿಯ ಜೊತೆಗೆ ಅಮರಾವತಿಯ ಕಡೆ ಹೆಜ್ಜೆ ಹಾಕಿದಾಗ ಮತ್ತೆ ಸೂರ್ಯಾಸ್ತ ಸಮೀಪಿಸುತ್ತಿತ್ತು..

                                                                                 -ಶಿವಪ್ರಸಾದ ಭಟ್ಟ
                              

Wednesday, May 11, 2016

ಲೈಫು ಇಷ್ಟೇನೆ

ಖಾಲಿ ದಾರಿ.. ಲೈಟು ಕಂಬ
ಹುಡುಗಿ ನೆನಪಲ್ ಪ್ರಯಾಣ..
ಕಿತ್ತೋದ್ ಚಪ್ಲಿ ಮುರಿದೋದ್ ಪೆನ್ನಂಗ್
ಜೀವ್ನ ‌ತುಂಬ ಜೋಪಾನ

ಹುಡುಗಿ ಸಿಕ್ಕು ಸ್ಮೈಲು ಕೊಟ್ಟು
ಮನಸಿಗೆ ನಾಟಿ ಹೂಬಾಣ..
ಮಲ್ಟಿಪ್ಲೆಕ್ಸು ಬಿಂಗೋ ಚಿಪ್ಸು
ಒಟ್ನಲ್ ಹೊಟ್ಟೆಗ್ ಪಾಷಾಣ

ಹೃದಯದ್ ಒರತೆ.. ನಿದ್ದೆ ಕೊರತೆ
ಬದ್ಕೋಕ್ ಒಂದು ಬರ್ಗರ್ರು..
ಪರ್ಸು ಪೂರ್ತಿ ಬರಗೆಟ್ ಹೋದ್ರೂ
ಜೇಬಲ್ ಮಾತ್ರ ಪಾರ್ಕರ್ರು..

ಐಡಿಯ ಏರ್ಟೆಲ್ ಕಾಲ್ ರೇಟ್ ಎಲ್ಲಾ
ಜಾಸ್ತಿ ಆಯ್ತು ಎಲ್ಲೆಲ್ಲೂ..
ಹಿಂಗೇ ಆಗಿ ಹಾಳಾಗ್ ಹೋದ್ರೆ
ಯಾವನ್ ತಲೆಗೆ ಲೈಟ್ ಬಿಲ್ಲು

ಮಾಲು ಡಾಲು ಶಾಲು ರೋಲು
ವಾಲೆಟ್ ತುಂಬೋದ್ ಅನುಮಾನ
ಮಿಸ್ಸಾಗ್ ಕಿಸ್ಸು ಸಿಕ್ರೆ ಛಾನ್ಸು
ಬಂಪರ್ ಲಾಟ್ರಿ ಬಹುಮಾನ

ಫೇಸ್ಬುಕ್ಕಲ್ಲಿ ಫೋಟೊ ಹಾಕು
ವಾಟ್ಸಾಪಲ್ಲೇ ರೋಮ್ಯಾನ್ಸು
ಕನ್ನಡಿ ಮುಂದೆ ಬಳ್ಕೊಂಡ್ ಕೂತ್ರೆ
ಮರ್ತೋಗುತ್ತೆ ಮ್ಯಾನರ್ಸು‌‌.

ಮೂವತ್ತೆರ್ಡು ಹಲ್ಲು ತೋರ್ಸಿ
ನಗ್ತಾ ಇರೋದೆ ಪೂರ್ತಿ ದಿನ
ಡಾರ್ಲಿಂಗ್ ರಾತ್ರಿ ಕನಸಲ್ ಬಂದು
ಕಿತ್ಕೊಂಡ್ ಹೋದ್ಮೇಲ್ ಹೃದಯಾನ..

ಪ್ರೀತಿ ಪ್ರೇಮ ಬದನೇಕಾಯಿ
ಹೇಳೋರ್ ಹೆಳ್ತಾರ್ ಮನಸಾರ
ಬದುಕು ಅಂದ್ರೆ ಉಪ್ಪು ಖಾರದ
ಸವತೆ ಕಾಯಿ ವ್ಯಾಪಾರ..

ಹುಡುಗಿ ಸೈಡಲ್ ಕ್ಯಾತೆ ಜಾಸ್ತಿ
ಮಾವ ಭಾವ ಪೇರೆಂಟು..
ಬಾದಾಮ್ ಹಲ್ವಾ ಬಾಯ್ಲಿಟ್ಟಂಗೆ
ಡಯಾಬಿಟಿಸ್ ಪೇಶೆಂಟು..

ಅವ್ಳಿಗ್ ಗಂಡು ಇವ್ನಿಗ್ ಗುಂಡು
ಪ್ರೀತಿಗ್ ಇಲ್ಲ ವಾರಂಟಿ..
ಅಕ್ಕಿ ಕಾಳು ತುಳಸಿ ನೀರು
ಬಾಯಲ್ ಬೀಳೋದ್ ಗ್ಯಾರೆಂಟಿ..

ಬಾರು ಬೀರು ಲವ್ವಲ್ ಜೋರು
ಅದ್ಕೆ ಮಲ್ಯ ಮಹಾರಾಜ‌..
ತವರಿಗ್ ಹೋದಂಗ್ ಬಾರಿಗ್ ಹೋಗು
ಹೇಳ್ಬುಟ್ಟವ್ನೆ ಯೋಗರಾಜ..

ಬ್ರೇಕಪ್ ಆದ್ರೂ ಮದ್ವೆ ಆದ್ರೂ
ಕಂಟ್ರೋಲ್ ಮಾಡೋದ್ ಮೇಡಮ್ಮು..
ಹುಡುಗಂಗ್ ಸಂಜೆ ಖಾಲಿ ಬೇಂಚಲ್
ಪೆನ್ನು ಪೇಪರ್ ಖಾಯಮ್ಮು

Tuesday, January 26, 2016

ಸ್ವಯಂವರ

"ಇನ್ನೆರಡು ದಿನದಲ್ಲಿ ಸ್ವಯಂವರವಂತೆ ಸಖೀ.."
ಸಖಿಯ ಮಾತು ಕೇಳಿ ಪಾಂಚಾಲಿಗೆ ಸಿಡಿಲು ಬಡಿದಂತಾಯಿತು. ಇನ್ನೆರಡು ದಿನದಲ್ಲಿ ಸ್ವಯಂವರವೆಂದರೇನು ಹುಡುಗಾಟದ ಮಾತೇ? ತಂದೆ ದ್ರುಪದ ಸಾರ್ವಭೌಮ ನನ್ನನ್ನು ಕೇಳದೇ ಹೇಗೆ ನಿರ್ಧರಿಸಿಯಾರು? ನನ್ನ ಮನಸಿನ ಭಾವನೆಗಳಿಗೆ ಬೆಲೆ ಕೊಡದೇ, ಕಾಮನೆಗಳನ್ನು ಗೌರವಿಸದೇ, ಯಾವನೋ ಕ್ಷತ್ರಿಯ ಕುಮಾರನಿಗೆ ಕೊಟ್ಟುಬಿಡುವ ಸಲುವಾಗಿ ನನ್ನನ್ನು ಹೆತ್ತರೇನು? ಪ್ರಶ್ನೆಗಳ ಪ್ರವಾಹ ಹರಿಯಿತು ಪಾಂಚಾಲಿಯ ಮನದಲ್ಲಿ. ದ್ರೋಣರ ದ್ವೇಷದ ಕಿಚ್ಚನ್ನು ಆರಿಸಬಂದ ಫಲ್ಗುಣನನ್ನು ವರಿಸಬೇಕೆಂದು ತಂದೆ ನನ್ನನ್ನು ಪಡೆದರಂತೆ. ಅರಗಿನ ಮನೆಯಲ್ಲಿ ಕುಂತೀಸಹಿತ ಪಾಂಡುತನಯರು ಭಸ್ಮೀಭೂತರಾಗಿರುವರೆಂಬ ಸುದ್ದಿಯೆಲ್ಲೆಡೆಯಿರುವಾಗ, ಯಾವನೋ ಪಂಥ ಗೆಲ್ಲುವ ಸರದಾರನಿಗೆ ನನ್ನನ್ನು ವರಿಸುವ ಗತಿ ಬಂದಿದ್ದರೆ, ಜನ್ಮಕ್ಕೇನು ಸಾರ್ಥಕ್ಯ? ಎಂಬಿತ್ಯಾದಿ ಬೇಸರದ ಮಾತುಗಳನ್ನು ಸಾರ್ವಭೌಮನ ಮುಂದೆ ಕೇಳಿಬಿಡಬೇಕೆನ್ನುವಷ್ಟರಲ್ಲೇ ಭಟರ ಉದ್ಘೋಷ ದ್ರುಪದನ ಆಗಮನದ ಸುಳಿವನ್ನು ಪಾಂಚಾಲಿಗೆ ನೀಡಿತು.

ಎಂದಿನ ರಾಜ ಗಾಂಭೀರ್ಯದಲ್ಲಿ ದ್ರುಪದನ ಆಗಮನವಾಯಿತು ಅಂತಃಪುರಕ್ಕೆ. ಮಗಳೆದುರು ನಿಂತು ಮಾತನಾಡುವ ಅವಕಾಶ ಸಿಕ್ಕಾಗಲೆಲ್ಲಾ ತುಂಬಿರುತ್ತಿದ್ದ ದ್ರುಪದನ ಕಂಗಳ ಕಾಂತಿ ಮಂದವಾಗಿತ್ತು. ಪಾಂಚಾಲಿ ಬಂದು ನಮಸ್ಕರಿಸಿದಳು.
"ಮಗೂ.. ಇನ್ನೆರಡು ದಿನಗಳಲ್ಲಿ ನಿನ್ನ ಸ್ವಯಂವರ ನಿಶ್ಚಯಿಸಿದ್ದೇನೆ. ನೋಡ ನೋಡುತ್ತಿದ್ದಂತೆ ನಿನಗೆ ಹದಿನೆಂಟು ತುಂಬಿದೆ. ಆಲಸ್ಯ ಸರಿಯಲ್ಲ. ಸಿದ್ಧಳಾಗು!" ಎಂದ ದ್ರುಪದ.
ಪಾಂಚಾಲಿ ಒಂದು ಕ್ಷಣ ಸ್ತಬ್ಧಳಾದಳು.
"ಬುದ್ಧಿ ಬಂದಾಗಿನಿಂದ ಫಲ್ಗುಣನೇ ನಿನ್ನ ಸಖನೆಂದು ಸಾರಿ ಸಾರಿ ಹೇಳಿ, ಆತನ ಅವಸಾನವಾಯಿತೆಂದೊಡೆ ಇನ್ನಾರಿಗೋ ಕನ್ಯಾದಾನ ಮಾಡಲು ಮನಸ್ಸಾದರೂ ಹೇಗಯಿತಪ್ಪಾ?" ಎಂದಳು ಪಾಂಚಾಲಿ.

"ಅರಗಿನ ಮನೆಯಲ್ಲಿ ಸುಟ್ಟು ಸಾಯಲು ಕುಂತೀಸುತರು ಕೈಲಾಗದವರಲ್ಲ. ಅಪ್ರತಿಮ ವೀರರು. ಕುರು ವಂಶ ಸಂಜಾತರು. ಅವರು ಅಳಿದಿರುವರೆಂದು ನಾನು ನಂಬುವುದಿಲ್ಲ. ನಿನ್ನ ಸ್ವಯಂವರವೆನು ಸಾಮಾನ್ಯದ್ದೇ? ತಿರುಗುವ ಮತ್ಸ್ಯ ಯಂತ್ರವನ್ನು ಛೇದಿಸಬಲ್ಲ ವೀರಾಗ್ರಣಿ ಮಾತ್ರ ನಿನ್ನ ಕೈಯ್ಯಲ್ಲಿನ ವಿಜಯ ಮಾಲೆಯನ್ನು ತೊಡಬಲ್ಲ. ಅದು ಪ್ರಪಂಚದಲ್ಲಿ ಫಲ್ಗುಣನಿಂದ ಮಾತ್ರ ಸಾಧ್ಯ. ಚಿಂತಿಸದಿರು!" ಎಂದವನೇ ದ್ರುಪದ ಅಂತಃಪುರದಿಂದ ಹೊರನಡೆದುಬಿಟ್ಟ. ಇದಕ್ಕಿಂತ ಹೆಚ್ಚಿನದ್ದನ್ನು ತಿಳಿಹೇಳುವ ತಾಳ್ಮೆಯಾಗಲೀ,  ವ್ಯವಧಾನವಾಗಲೀ ಅವನಲ್ಲಿರಲಿಲ್ಲ.

ಹಾಗಾದರೆ ಪಾಂಡವರು ಅರಗಿನ ಮನೆಯಲ್ಲಿ ಸತ್ತಿದ್ದು ಸುಳ್ಳೇ? ಅಗ್ನಿಜ್ವಾಲೆಯ ಬಲೆಯಿಂದ ಫಲ್ಗುಣ ಪಾರಾಗಿರಬಹುದೇ? ಪಾರಾಗಿದ್ದರೆ ಎಲ್ಲಿರಬಹುದು? ನನ್ನ ಸ್ವಯಂವರದ ಸುದ್ದಿ ಅವನಲ್ಲಿಗೂ ತಲುಪಿರಬಹುದೇ? ತಲುಪಿದ್ದೇ ಆದಲ್ಲಿ ಪಾಂಚಾಲನಗರಕ್ಕೆ ಬಂದು ಮತ್ಸ್ಯ ಯಂತ್ರವನ್ನು ಬೇಧಿಸುವ ಸಾಹಸ ಮಾಡಬಹುದೇ? ಅವನೊಡನೆ ಯುಧಿಷ್ಠಿರ, ಭೀಮಸೇನರೂ ಬರಬಹುದೇ? ಕುಂತೀಮಾತೆ ಹೇಗಿರಬಹುದು? ಪಾರ್ಥನನ್ನು ಕಂಡು ಕ್ಷತ್ರಿಯ ಕುಮಾರರ ಸ್ಥಿತಿ ಹೇಗಾಗಬಹುದು? ತಂದೆ ಹಸ್ತಿನಾವತಿಗೂ ಆಮಂತ್ರಣ ನೀಡಿರುವರಂತೆ, ಸುಯೋಧನ ಬಂದರೆ ಆತ ಹೇಗೆ ಪ್ರತಿಕ್ರಿಯಿಸಬಹುದು? ಎಂಬಿತ್ಯಾದಿ ಪ್ರಶ್ನೆಗಳು ಪಾಂಚಾಲಿಯ ಮನದ ತುಮುಲವನ್ನು ಹೆಚ್ಚಿಸಿದ್ದವು. ಪಾಂಚಾಲಿ ಚಿಂತೆಯಲ್ಲಿಯೇ ಮೌನಕ್ಕೆ ಶರಣಾದಳು.

ಕಳೆದೆರಡು ದಿನಗಳಿಂದ ಪಾಂಚಾಲಿಯ ಮನಸ್ಸನ್ನು ಕದಡಿದ್ದ ಪ್ರಶ್ನೆಗಳಿಗೆ ಉತ್ತರ ಸಿಗುವ ಕಾಲ, ಸ್ವಯಂವರದ ದಿನ ಬಂದೇ ಬಿಟ್ಟಿತು. ಪಾಂಚಾಲನಗರಿ ನವ ವಧುವಿಂತೆ ಸಿಂಗಾರಗೊಂಡಿತ್ತು. ಅರಮನೆಯ ತುಂಬೆಲ್ಲಾ ಹಬ್ಬದ ವಾತಾವರಣ. ಪಾಂಚಾಲಿ ಅರಿಶಿಣ ಸ್ನಾನ ಮಾಡಿ ಅಲಂಕೃತಳಾದಳು. ಯುವರಾಣಿಯ ಸ್ವಯಂವರಕ್ಕೆ ಪಾಂಚಾಲನಗರಿ ಸಿದ್ಧಗೊಂಡಿತ್ತು. ವಿಶಾಲ ಬಯಲಿನ ಸ್ವಯಂವರ ಮಂಟಪಕ್ಕೆ ಪಾಂಚಾಲಿ ಶ್ವೇತಾಶ್ವ ರಥದಲ್ಲಿ ಬಂದಿಳಿದಳು. ವಿಶಾಲ ಬಯಲು ಪ್ರಜಾ ಜನರಿಂದ, ಕ್ಷತ್ರಿಯ ಬ್ರಾಹ್ಮಣಾದಿಗಳಿಂದ ತುಂಬಿತ್ತು. ಸಂಪ್ರದಾಯದಂತೆ ಆಗ್ನೇಯ ದಿಕ್ಕಿನಲ್ಲಿ ಮಂಟಪ ಪಾಂಚಾಲಿಗಾಗಿ ಕಾದು ನಿಂತಿತ್ತು. ವಾಮಭಾಗದಲ್ಲಿ ವಿಪ್ರರಿಗಾಗಿ ಸ್ಥಾನ ಮೀಸಲಿದ್ದರೆ ದಕ್ಷಿಣದಲ್ಲಿ ಕ್ಷತ್ರಿಯರು ಆಸೀನರಾಗಿದ್ದರು. ಕ್ಷತ್ರಿಯರ ಸಾಲಿನಲ್ಲಿ ಗಾಂಧಾರ, ಕನೋಜ, ಮಧುರೆ, ದ್ವಾರಕೆ, ಹಸ್ತಿನಾವತಿ, ಸಾಕೇತ ಇವೇ ಮೊದಲಾದ ರಾಜ್ಯಗಳ ಮಹಾರಾಜರು ಆಸೀನರಾಗಿದ್ದರು. ರಾಜರ ಸಾಲಿನಲ್ಲಿ ಕುಳಿತಿದ್ದ ಬಲಭದ್ರ - ವಾಸುದೇವರನ್ನು ಕಂಡು ಪಾಂಚಾಲಿಗೆ ಆನಂದವಾಯಿತು. ದ್ವಿಜರ ಸಾಲಿನಲ್ಲಿ ಕೃಪ, ಅಶ್ವಥ್ಥಾಮ, ವಿದುರಾದಿ ವಿಪ್ರರು ಆಸೀನರಾಗಿದ್ದರು. ಪಾಂಚಾಲಿಯ ಕಂಗಳು ಇವರೆಲ್ಲರನ್ನೂ ಬಿಟ್ಟೂ ಫಲ್ಗುಣನನ್ನು ಹುಡುಕುತ್ತಿತ್ತು.

ಕುಲಪುರೋಹಿತರು ವೇದಿಕೆಯ ಮೇಲೆ ಬಂದು ವೇದಘೋಷ ಮಾಡಿದರು. ದ್ರುಪದ ಸ್ವಯಂವರದ ನಿಯಮಗಳ ಘೋಷಣೆ ಮಾಡಿದ. ಪಾಂಚಾಲಿ ಮತ್ಸ್ಯಯಂತ್ರದತ್ತ ನೋಡಿದಳು. ಮೇಲೆ ತಿರುಗುವ ಚಕ್ರ. ಚಕ್ರಕ್ಕೆ ಮೀನಿನ ಗೊಂಬೆಯನ್ನು ಕಟ್ಟಲಾಗಿತ್ತು. ಕೆಳಗಡೆ ಇರುವ ಎಣ್ಣೆಯಲ್ಲಿ ಮೀನಿನ ಬಿಂಬ ನೋಡಿ ಕಣ್ಣಿಗೆ ಬಾಣ ಹೂಡುವ ಧೀರನಿಗೆ ಪಾಂಚಾಲಿ ಸಖಿಯಾಗುತ್ತಾಳೆ. ದ್ರುಪದಪುತ್ರಿಯ ಕೈ ಹಿಡಿಯುವವ ಎಂಥ ಶೂರನಾಗಿರಬಹುದು. ಖಂಡಿತಾ ಇದು ಫಲ್ಗುಣನಿಂದ ಮಾತ್ರ ಸಾಧ್ಯ. ಪಾಂಚಾಲಿಯ ಮನಸು ಬೀಗಿತು.

ಶಂಖನಾದದೊಂದಿಗೆ ಸ್ಪರ್ಧೆ ಪ್ರಾರಂಭವಾಯಿತು. ರಾಜಕುಮಾರರು, ಸಾರ್ವಭೌಮರು, ಸಾಮಂತರು ಒಬ್ಬೊಬ್ಬರಾಗಿ ಬಂದು ಮತ್ಸ್ಯಯಂತ್ರ ಬೇಧಿಸಹೊರಟರು. ಪ್ರತಿಯೋರ್ವ ಕ್ಷತ್ರಿಯ ಬಂದಾಗಲೂ ಪಾಂಚಾಲಿ ಇವನು ಅರ್ಜುನನಿರಬಹುದೇ ಎಂದು ನೋಡತೊಡಗಿದಳು. ಎಲ್ಲರೂ ಸೋಲತೊಡಗಿದಾಗ ಪಾಂಚಾಲಿಯ ಆಸೆಗಳು ಸಾಯತೊಡಗಿದವು. ಶಿಶುಪಾಲನಿಗೆ ಗುರಿಯಿಡಲಾಗಲಿಲ್ಲ. ದಂತವಕ್ರನೂ ಸೋತ. ಜರಾಸಂಧ, ಸುಯೋಧನರು ಕೂದಲೆಳೆಯ ಅಂತರದಲ್ಲಿ ಸೋತರು. ಪಂಥಗೆಲ್ಲಬಲ್ಲ ವೀರ ಯಾರೂ ಇಲ್ಲಿಲ್ಲವೆಂದು ಜನ ಗುಸುಗುಡತೊಡಗಿದರು.

ಇದ್ದಕ್ಕಿದ್ದಂತೆ ಕ್ಷತ್ರಿಯರ ಸಾಲಿನಿಂದ ಓರ್ವ ಸುಂದರ ತರುಣ ಮಿಂಚಿನಂತೆ ಎದ್ದು ಬಂದ. ಕಂಗಳಲ್ಲಿ ಕಾಂತಿಯಿತ್ತು, ಗೆಲ್ಲುವ ಛಲವಿತ್ತು. ಹೊಳೆಯುವ ಕಣ್ಣು, ನೀಳದೋಳುಗಳು, ಮೈಕಟ್ಟು, ಗಾಂಭೀರ್ಯ ಫಲ್ಗುಣನನ್ನೇ ಹೋಲುತ್ತಿತ್ತು. ಇವನೇ ಪಾರ್ಥನಿರಬಹುದೇ? ಹಾಗಾದರೆ ಕೌರವರ ಜೊತೆಯಲ್ಲೇನು ಮಾಡುತ್ತಿದ್ದ? ಎಂದು ಯೋಚಿಸತೊಡಗಿದಳು. ನೋಡುತ್ತಿದ್ದಂತೆ ಕ್ಷತ್ರಿಯ ಚಿರತೆಯಂತೆ ಯಂತ್ರದತ್ತ ಮುನ್ನುಗ್ಗಿದ, ಮಂಡಿಯೂರಿ ಕುಳಿತ, ಬಿಂಬದತ್ತಲೇ ದೃಷ್ಟಿನೆಟ್ಟ. ಬಿಲ್ಲು ಹೆದೆಯೇರಿಸಿ ಗುರಿಯಿಟ್ಟ..

"ಸೂತಪುತ್ರ ಕ್ಷತ್ರಿಯ ಕುಮಾರಿಯನ್ನು ವರಿಸುವುದು ಶಾಸ್ತ್ರ ಸಮ್ಮತವಲ್ಲ.."
ಜನಸ್ತೋಮದಿಂದ ಯಾರೋ ಕೂಗಿದರು. ಇಡೀ ಸಭೆಯ ಚಿತ್ತ ಕ್ಷತ್ರಿಯನತ್ತ ತಿರುಗಿತು. ಆತ ತಲೆ ತಗ್ಗಿಸಿದ. ಪಾಂಚಾಲಿ ಸಖಿಯತ್ತ ಕಣ್ಣು ಹೊರಳಿಸಿದಳು.

"ಕರ್ಣನಂತೆ.. ರಾಧೇಯನಂತೆ.. ಹಸ್ತಿನಾಪುರಿಯ ಅಂಗರಾಜ್ಯಾಧಿಪನಂತೆ.. ಸುಯೋಧನನ ಪರಮಾಪ್ತನಂತೆ.. ಫಲ್ಗುಣನಿಗಂತೂ ಪರಮ ವೈರಿಯಂತೆ.." ಕಣ್ಸನ್ನೆ ಅರಿತವಳಂತೆ ನುಡಿದಳು ಸಖಿ.
ಅಂದರೆ ಇಷ್ಟು ಹೊತ್ತಿನ ತನಕ ತನ್ನ ಗಾಂಭೀರ್ಯದಿಂದ ನನ್ನ ಮನಸ್ಸನ್ನು ಗೆದ್ದವ ಭಾರ್ಗವ ರಾಮನ ಶಿಷ್ಯ.. ಕರ್ಣ.. ಪಾಂಚಾಲಿ ವಿಚಲಿತಳಾದಳು. ಅತ್ತ ರಾಧೇಯ ತಲೆತಗ್ಗಿಸಿ ಪಂಥದಿಂದ ಹಿಂದೆಸರಿದುಬಿಟ್ಟ. ಮಿತ್ರನನ್ನು ಅವಮಾನಿಸಿದ್ದಕ್ಕೆ ಕೋಪದಿOದ ಸುಯೋಧನ ಕುದಿಯುತ್ತಿದ್ದಂತೆ ಕಂಡಿತು ಪಾಂಚಾಲಿಗೆ. ಫಲ್ಗುಣನಿಲ್ಲ. ಭಾರ್ಗವರಾಮನ ಶಿಷ್ಯನೂ ಸೋತ. ಇನ್ನಾರಿಂದ ಸಾಧ್ಯ ಯಂತ್ರಬೇಧನೆ? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡತೊಡಗಿತು.

"ಕ್ಷತ್ರಿಯರಿಲ್ಲದಿದ್ದರೆ ಬ್ರಾಹ್ಮಣರು ಪ್ರಯತ್ನಿಸಬಹುದೇ.?" ಇದ್ದಕ್ಕಿದ್ದಂತೆ ವಿಪ್ರಸಮೂಹದ ಮಧ್ಯದಿಂದ ಬಂದ ಧ್ವನಿ ಎಲ್ಲರನ್ನೂ ತನ್ನತ್ತ ಸೆಳೆಯಿತು. ಬ್ರಾಹ್ಮಣ ಸಮೂಹದಿಂದ ಒಬ್ಬ ತರುಣ ಎದ್ದು ನಿಂತ. ಕರ್ಣನನ್ನೇ ಹೋಲುತ್ತಿದ್ದ. ದೃಷ್ಟದ್ಯುಮ್ನ ಮುಂದೆಬಂದ. "ಖಂಡಿತವಾಗಿ. ಚತುರ್ವರ್ಣದಲ್ಲಿ ಯಾರಾದರೂ ಪ್ರಯತ್ನಿಸಬಹುದು." ಎಂದ.
ವಿಪ್ರ ಮುಂದೆ ಬಂದು ಎಲ್ಲರಿಗೂ ನಮಸ್ಕರಿಸಿದ. ಪಾಂಚಾಲಿಯ ಎದೆಬಡಿತ ಹೆಚ್ಚಾಯಿತು. ನೋಡುತ್ತಿದ್ದಂತೆ ಆತ ಬಿಂಬದತ್ತ ನೋಡಿ ಹೆದೆಯೇರಿಸಿ ಗುರಿಯಿಟ್ಟು ಮೀನಿನ ಕಣ್ಣಿಗೆ ಬಾಣ ನೆಟ್ಟುಬಿಟ್ಟ. ಕಿಕ್ಕಿರಿದು ತುಂಬಿದ್ದ ಜನಸ್ತೋಮದಿಂದ ಜಯಘೋಷವಾಯಿತು. ದ್ರುಪದ, ದೃಷ್ಟದ್ಯುಮ್ನರ ಮುಖದಲ್ಲಿ ಮಂದಹಾಸ ಮೂಡಿತು. ಪಾಂಚಾಲಿ ಮೂಕವಿಸ್ಮಿತಳಾದಳು.

ಕ್ಷತ್ರಿಯರ ಸ್ವಯಂವರದಲ್ಲಿ ಬ್ರಾಹ್ಮಣ ಗೆಲ್ಲುವುದೆಂದರೇನು.. ಕ್ಷತ್ರಿಯಕುಲವೆಲ್ಲಾ ಕೋಪದಿಂದ ಕುದಿಯಿತು. ರಾಜರು ವಿಪ್ರನ ಮೇಲೆರಗಲು ನಿಂತರು. ಇದ್ದಕ್ಕಿದ್ದಂತೆ ಬಲಿಷ್ಠ ಮೈಕಟ್ಟಿನ ಇನ್ನೋರ್ವ ಬ್ರಾಹ್ಮಣ ಮುಂದೆಬಂದು ನಿಂತ. ಕ್ಷಣ ಮಾತ್ರದಲ್ಲಿ ಮೇಲೆ ಬಿದ್ದ ರಾಜರುಗಳನ್ನೆಲ್ಲಾ ಹಿಮ್ಮೆಟ್ಟಿಸಿದ. ಮುಷ್ಠಿಯೇಟು ತಿಂದ ಸುಯೋಧನ ಕೈಕೈ ಹಿಸುಕಿಕೊಂಡ. ಯಾವಾಗಲೂ ಮಂತ್ರ - ಪೂಜೆ - ಶಾಸ್ತ್ರಗಳೆಂದು ತಮ್ಮಷ್ಟಕ್ಕೆ ತಾವಿರುವ ಬ್ರಾಹ್ಮಣರ ಪೌರುಷ ಕಂಡು ಇವರು ವಿಪ್ರರಲ್ಲವೇನೋ ಎಂದೆನಿಸಿತು ಪಾಂಚಾಲಿಗೆ. ಅಷ್ಟರಲ್ಲಾಗಲೇ ದೃಷ್ಟದ್ಯುಮ್ನ ಮಧ್ಯ ಪ್ರವೇಶಿಸಿ ವಾತವರಣ ತಿಳಿಗೊಳಿಸಿದ. ಎಲ್ಲವೂ ಸರಿಯಾಯಿತು. ಪರಿಸ್ಥಿತಿ ಶಾಂತವಾಯಿತು. ಮಾಲೆಹಿಡಿದು ಬಂದು ಪಾಂಚಾಲಿ ವಿಪ್ರನಿಗೆ ತೊಡಿಸಿದಳು. ಪ್ರಜೆಗಳೆಲ್ಲಾ ಉದ್ಘೋಷ ಮಾಡಿದರು. ಮಂಗಳವಾದ್ಯಗಳು ಮೊಳಗಿದವುಪುಷ್ಪವೃಷ್ಟಿಯಾಯಿತು.


ಅಂತೂ ಪಾಂಚಾಲಿ ವೀರ ಬ್ರಾಹ್ಮಣನ ಕೈ ಹಿಡಿದಳು. ಪಾಂಚಾಲಿಯ ಬೆರಳುಗಳು ಆತನ ಬೆರಳುಗಳ ಮಧ್ಯೆ ಬಿಗಿಯಾಗಿ ಬಂಧಿತವಾಗಿದ್ದವು. ಪಾಂಚಾಲಿಯ ಮನಸ್ಸು ಸಂಭ್ರಮಿಸುತ್ತಿತ್ತು.. ಬೀಗುತ್ತಿತ್ತು. ಆದರೆ ಹೃದಯದ ಯಾವುದೋ ಮೂಲೆಯಲ್ಲಿ ರಾಧೇಯನಿದ್ದ.. ನೆನಪಾಗುತ್ತಿದ್ದ..!
               
                                                                                          -ಶಿವಪ್ರಸಾದ ಭಟ್ಟ


ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...