Tuesday, May 16, 2017

ಮತ್ತೆ ಕನಸಾದವಳು..!

ಅವಳಿಲ್ಲದ ಸಂಜೆಗಳನ್ನು ಕಳೆಯುವುದು ಈಗೀಗ ಕಷ್ಟವಾಗುತ್ತಿದೆ.. ಹೌದು.! ನನ್ನವಳು, ಮುಸ್ಸಂಜೆಗೊಂದು ಅರ್ಥ ಕೊಟ್ಟು, ಮನದಲ್ಲಿ ವಿರಹದ ಮೊಳಕೆಯೊಡೆಸಿ ಹೋಗಿದ್ದಾಳೆ ಈಗ. ಅವಳಿಲ್ಲದ ಪ್ರತಿ ಸಂಜೆ, ನಾಳೆ ಬರುತ್ತೇನೆ ಎಂದು ಹೇಳಿ ಹೋಗುವ ಸೂರ್ಯನ ಅಸ್ತಮಾನವಾಗಿ ಉಳಿದಿಲ್ಲವೀಗ. ಅವಳುಳಿಸಿ ಹೋದ ಸಾವಿರಾರು ಮಾರ್ದವತೆಗಳಿಗೆ ಹೊಸ ಉದಯದ ಪ್ರತೀಕವಾಗಿ ಪ್ರತಿ ಸಂಜೆ ಈಗೀಗ ಸಾಕ್ಷ್ಯ ಹೇಳಲು ಕಾಯುತ್ತಿರುತ್ತವೆ. ಮುಳುಗುತ್ತಿರುವ ನೇಸರನ ಕಿರಣಗಳು ಮಂದವಾದಂತೆ ನನ್ನೊಳಗಿನ ಅವಳ ಕನಸುಗಳು ಅಂತರ್ಮುಖಿಯಾಗುತ್ತವೆ.. ಮತ್ತೆ ಚಿಗುರೊಡೆಯುತ್ತವೆ. ಮತ್ತವಳದೇ ಕೂಗಿನೊಂದಿಗೆ ಹೊಸ ಕನಸುಗಳಾಗಿ ಟಿಸಿಲೊಡೆಯುತ್ತವೆ. ಅವಳು ಯಾವಗಲೂ ಒರಗಿ ಕೂರುತ್ತಿದ್ದ ಬಲಭುಜದ ಭಾರ ಕಮ್ಮಿಯಾದಂತಾಗಿ ಕಣ್ಣು ತೇವವಾಗುತ್ತವೆ. ನನ್ನೊಳಗಿನಿಂದಲೇ ಎಲ್ಲೋ ಮೂಲೆಯಲ್ಲಿ ಅವಳಿಟ್ಟ ಮುತ್ತಿನ ಕೂಸು ಗೋಗರೆಯುತ್ತದೆ, ಮತ್ತವಳದೇ ಮುತ್ತಿಗಾಗಿ..!

 

ಅವಳೂರು ಇಲ್ಲಿಂದ ದೂರವೇನಲ್ಲ.. ಆದರೆ ಅಲ್ಲಿಯೂ ಅವಳಿರುವ ಸಾಧ್ಯತೆಯಿಲ್ಲ. ಹಠವಾದಿಯವಳು. ತುಂಬಾ ದೂರ ಹೋಗಿರಬಹುದು; ಇಲ್ಲಿರುವ ನನ್ನನ್ನು ಅಲ್ಲೆಲ್ಲೋ ಹುಡುಕಿ.. ಅವಳ ಪ್ರತಿ ಹೆಜ್ಜೆಯಲ್ಲೂ ನಾನಿರುವ ತವಕ ನನ್ನನ್ನು ಅಲ್ಲಿಗೂ ಕರೆದೊಯ್ಯಬಹುದು.! ಹಾಂ! ಸಾಧ್ಯತೆಯಿದೆ. ಆದರೆ ವಿರಳ! ಯಾಕೆಂದರೆ ಹೋಗುವಾಗಲೂ ಅವಳ ನೆನಪಲ್ಲಿದ್ದದ್ದು ನಾನು ಮಾತ್ರ. ಅವಳ ಗುಂಗಿನಿಂದ ಮೈಮರೆತಿದ್ದ ನಾನು ಮಾತ್ರ. ಅದರಿಂದಲೇ ಏನೋ, ಹೋದ ದಾರಿಯ ಯಾವುದೇ ಕುರುಹನ್ನು ಉಳಿಸಿ ಹೋಗಿಲ್ಲ ಅವಳು. ಅವಳ ಆಲಿಂಗನ ಸಾವಿರದ ಕಥೆ ಹೇಳುವ ಸಂದರ್ಭದಲ್ಲಿ, ಅವಳಿಲ್ಲದ ನೈಜತೆ ಅವಳ ಗುಂಗಿನಿಂದ ಬಲವಂತವಾಗಿ ಎಳೆದು ತಂದಾಗ ಅವಳಿನ್ನು ನೆನಪಾಗಿ ಮಾತ್ರ ಉಳಿಯಲು ಸಾಧ್ಯ; ನನ್ನರಸಿ ಬರುವವರೆಗೂ.! ಒಂದು ಧೈರ್ಯ, ಅವಳೊಳಗಿರುವ ನನ್ನ ಕುರಿತಾದ ಹಪಹಪಿಕೆ ಇಂದಿಗೂ ನನ್ನೊಳಗೆ ಗುಪ್ತಗಾಮಿನಿಯಾಗಿ ಜೀವಂತವಿರುವುದರಿಂದಲೇ, ಪ್ರತೀ ಸಂಜೆಯೂ ಅವಳಿಂದಲೇ ಜೀವಿಸುತ್ತಿದ್ದೇನೆ.. ದಾರಿ ತಿಳಿದಿಲ್ಲದಿದ್ದರೂ ಅವಳಿರುವಲ್ಲಿಗೆ ಹೋಗಿ ಬರುತ್ತಿದ್ದೇನೆ. ಪ್ರತಿ ಬಾರಿ ಹೋದಾಗಲೂ ನೋಡುತ್ತಾಳೆ, ಮುಗುಳ್ನಗುತ್ತಾಳೆ, ಮೃದುವಾಗಿ ನನ್ನನ್ನೊಮ್ಮೆ ತಾಕಿ ಮಾಯವಾಗುತ್ತಾಳೆ. ಪ್ರತಿ ಸಂಜೆಯ ಕಥೆಯಿದು. ಪುನರಾವರ್ತನೆಯಾಗುತ್ತಿರುತ್ತದೆ, ಕಾರಣವಿಲ್ಲದೇ. ಹಗಲಿಡೀ ಅವಳೂರಿನಿಂದ ಬರುವ ಕಾಗದಕ್ಕಾಗಿ ಕಾಯುತ್ತಿರುತ್ತೇನೆ. ಇಳಿಸಂಜೆಯಲ್ಲಿ ಮಾತ್ರ ಒಬ್ಬಂಟಿಯಾಗುತ್ತೇನೆ. ಅವಳಿದ್ದರೂ;ಇಲ್ಲದಿದ್ದರೂ..!

ಅವಳು ಯಾವಾಗಲೂ ಹೀಗಿದ್ದವಳಲ್ಲ. ಯಾವ ಸಂಜೆಯನ್ನೂ ನನಗೆ ಒಂಟಿಯನ್ನಾಗಿಸಿ ಬಿಟ್ಟು ಹೋದವಳಲ್ಲ. ಅವಳಿಗೇಕೋ ನನ್ನನ್ನು ಹುಡುಕುವ ಮನಸ್ಸಾಗಿದೆಯಂತೆ. ನನ್ನೊಳಗಿನ ನಾನು ಅವಳೊಳಗಿಂದ ಮಾಯವಾಗಿದ್ದೇನಂತೆ. ಹುಡುಕಿ ಕರೆತರುವ ಸಲುವಾಗಿ ಹೊರಟುಬಿಟ್ಟಿದ್ದಾಳೆ. ಬುದ್ಧಿಯ ಬಲವಂತಿಕೆಗೆ ಮನಸ್ಸಿನ ನಾಜೂಕುತನವನ್ನು ಬಲಿಪಶುವಾಗಿಸಿ ನಡೆದುಬಿಟ್ಟಿದ್ದಾಳೆ. ಕಾದು ಕೂರುವ ಮನಸಿನ ಮೂಕ ರೋದನೆ ಕೇಳಿಸದಂತೆ ಕಾಣೆಯಾಗಿದ್ದಾಳೆ. ಅವಳು ಜೊತೆಯಿದ್ದ ಪ್ರತಿ ಕ್ಷಣದಲ್ಲೂ ಕನಸುಗಳಿಗೆ ಬಣ್ಣ ಹುಡುಕುವುದೇ ಕಾಯಕವಾಗಿತ್ತು. ಇದ್ದೊಂದು ಕೆಲಸವನ್ನೂ ಕಸಿದುಕೊಂಡು ಹೊತ್ತಿನ ಊಟಕ್ಕೂ ಕುತ್ತು ತಂದಿದ್ದಾಳೆ.. ಅವಳ ನೆನಪುಗಳೇ ಮೂರು ಹೊತ್ತು ಹೊಟ್ಟೆ ತುಂಬಿಸುತ್ತಿದ್ದ ಕಾಲವೊಂದಿತ್ತು! ಮೂರು ದಿನವಾಯಿತು. ಕೆಲಸವಿಲ್ಲ. ಅವಳಿಲ್ಲದ ಪ್ರತಿ ಸಂಜೆಯೂ ಮನಸ್ಸು ಏನನ್ನೋ ಗೀಚುತ್ತದೆ. ಸುಮ್ಮನೇ ಹಾಡುತ್ತದೆ, ಇದೆಲ್ಲ ಅವಳಿಗೆ ಕೇಳಿಸಬಹುದೆಂಬ ಮಹದಾಸೆಯಿಂದ. ಅವಳ ಪ್ರೀತಿಯೊಂದೇ ಎಲ್ಲಾ ಮಹದಾಸೆಗೂ ದನಿಯಾಗಿ ನಿಂತಿರುತ್ತದೆ; ಅವಳು ತಿರುಗಿ ಬರುವ ವರೆಗೂ. ಒಬ್ಬಂಟಿಯಾಗಿಯೇ ಇರುತ್ತೇನೆ, ಮೂಕನಾಗಿಯೇ ಹಾಡುತ್ತೇನೆ, ಮನಸಿನಲ್ಲಿಯೇ ಗೀಚುತ್ತೇನೆ; ಅವಳು ಬರುವ ವರೆಗೂ.

ಅವಳೇನು ಕ್ರೂರಿಯಲ್ಲ. ಸಾವಿರ ವರ್ಷವಾದರೂ ಸವೆಯದ ಮಧುರ ಭಾವನೆ ತುಂಬಿಸಿಟ್ಟಿದ್ದಾಳೆ ಅವಳಲ್ಲಿ. ಮನದರಮನೆಯಲ್ಲಿ, ಖಾಸಗೀ ಅಂತಃಪುರದಲ್ಲಿ, ಅವಳದೇ ಪ್ರೇಮದ ತೂಗುಮಂಚದಲ್ಲಿ  ಪ್ರತಿಸಲವೂ ನನ್ನನ್ನೇ ತೂಗುತ್ತಾಳೆ. ಪೂಜೆ ಮಾಡುತ್ತಾಳೆ. ಬೃಂದಾವನದ ರಾಧೆಯಾಗಿ ನನ್ನೊಡನೆ ಆಡುತ್ತಾಳೆ, ಹಾಡುತ್ತಾಳೆ. ನಿಷ್ಕಲ್ಮಷ ಪ್ರೀತಿಗೆ ನಾಂದಿಯಾಗುತ್ತಾಳೆ. ಎದೆಗೊರಗಿ ಅವಳು ಬಿಟ್ಟ ಪ್ರತಿಯೊಂದು ನಿಟ್ಟುಸಿರೂ ಸರಿಯಾಗಿ ನೆನಪಿನಲ್ಲಿರುತ್ತವೆ ನನಗೆ. ನನ್ನೊಳಗಿನ ಅವಳ ಪ್ರೀತಿಗೆ ಕಾವು ಕೊಟ್ಟ ಪ್ರೀತಿಯ ಬಿಸಿಯದು, ಮರೆಯುವುದಿಲ್ಲ. ಆ ಉಸಿರಿಲ್ಲದೇ ಪ್ರತಿ ಸಂಜೆಯೂ ತಂಪಾಗಿ ಮಾಯವಾಗುತ್ತವೆ, ನನಗರಿವಿಲ್ಲದೇ! ಹೀಗಾಗಿಯೇ ಕಾಯುತ್ತಿರುತ್ತೇನೆ.. ಇನ್ನೂ ಬಿಸಿಯಾಗಿ! ಹಾಗೆಂದ ಮಾತ್ರಕ್ಕೆ ನಾನೇನೂ ಭಗ್ನಪ್ರೇಮಿಯಲ್ಲ. ಹೋಗುವಾಗಲೇ ಹೇಳಿ ಹೋಗಿದ್ದಾಳೆ ಅವಳು, ಬರುವ ವರೆಗೂ ಅವಳು ನನ್ನಲ್ಲೇ ಇರುತ್ತಾಳಂತೆ. ನನಗಂತೂ ಅರಿವಾಗುತ್ತಿಲ್ಲ. ಇಲ್ಲಿಯೂ ಒಂಟಿತನದ್ದೇ ಸಂತೆ. ಅವಳ ಬರುವಿಕೆಯದ್ದೇ ಚಿಂತೆ. ಈಗಲೇ ಹೇಳಿಬಿಡುತ್ತೇನೆ.. ನನಗೆ ತಾಳ್ಮೆ ಕಲಿಸಿದ್ದೇ ಅವಳು! ಬಂದೇ ಬರುತ್ತಾಳೆ. ಜೊತೆಯಲ್ಲೇ ಇರುತ್ತಾಳೆ. ಹಂಬಲಿಕೆಯಿದು. ಪ್ರತಿರಾತ್ರಿಯ ಕನವರಿಕೆಯಿದು. ಅವಳು ಬಂದಮೇಲೆ ನಿಲ್ಲಬಹುದು. ಮೊದಲಿನಂತಾಗಬಹುದು.

ಅವಳಿಲ್ಲದೇ ನಾನೇಕೋ ಮಂಕಾಗಿದ್ದೇನೆ.! ಕನಸುಗಳು ಜಾಸ್ತಿಯಾದರೂ, ಬಣ್ಣಕೊಡಲು ಕುಂಚಗಳೇ ಕಾಣುತ್ತಿಲ್ಲ.  ಬಣ್ಣಗಳೂ ಖಾಲಿಯಾಗಿವೆ ಒಂದರ್ಥದಲ್ಲಿ. ಬರುವಾಗ ತರಬಹುದು ಅವಳು; ಯಾಕೆಂದರೆ ನಾನು ಬಣ್ಣಕೊಟ್ಟ ಕನಸುಗಳೆಂದರೆ ಅವಳಿಗೆ ಪಂಚಪ್ರಾಣ. ಎಲ್ಲಾ ಕನಸುಗಳನ್ನೂ ಮುದ್ದಿಸುತ್ತಾಳೆ. ಮೈದಡವುತ್ತಾಳೆ. ಅಲ್ಲೆಲ್ಲೋ ಅನತಿ ದೂರದಲ್ಲಿದ್ದರೂ ನನಗೆ ಕನಸಾಗುವಾಗ ಪಕ್ಕ ನಿಂತಿರುತ್ತಾಳೆ. ಬರಲಾರದಷ್ಟು ದೂರವೇನಲ್ಲ ಈಗ. ಆದರೂ ಕನಸುಗಳೇ ಸಾಲುತ್ತಿಲ್ಲ. ಅವಳು ಅಲ್ಲೆಲ್ಲೋ ನಿಂತು ನನ್ನನ್ನೇ ಕಾಯುತ್ತಿರಬಹುದು ಈಗಲೂ. ನನಗೇನೂ ತೋಚುತ್ತಿಲ್ಲ. ಹೇಳಿದ್ದೇನಲ್ಲ. ಮಂಕಾಗಿದ್ದೇನೆ ನಾನು! ಅಲ್ಲೆಲ್ಲೋ ಸಮುದ್ರದಂಡೆಯಂತೆ. ನಾನು ಸಿಕ್ಕಿದರೂ ಸಿಗಬಹುದಂತೆ. ಹುಡುಕುವ ನೆಪವಷ್ಟೆ. ನನ್ನನ್ನೂ ಕರೆದೊಯ್ಯುವ ಹಂಬಲ. ನೇರವಾಗಿ ಕರೆದೊಯ್ಯುವ ಸಮಯವಿಲ್ಲ ನೋಡಿ. ದೂರವಾಗಿ ಕರೆದೊಯ್ದಿದ್ದಾಳೆ. ಎಷ್ಟು ಮುದ್ದಿಸುತ್ತಿದ್ದಾಳೊ ಒಳಗೊಳಗೇ. ಅನುಭವಿಸಲೂ ಸಾಧ್ಯವಾಗುತ್ತಿಲ್ಲ.! ಹಾಳಾದ ಸಂಜೆ. ಮತ್ತೆ ಮತ್ತೆ ತಂಪಾಗಿಸುತ್ತಿದೆ. ಅವಳೊರಗಿದ ಮೈ ಬಿಸಿ ಆರಿಸುತ್ತಿದೆ. ಅವಳ ಉಸಿರು ಮತ್ತೆ ತಾಕುವ ವರೆಗೂ ನನ್ನೆದೆ ಹೀಗೆ ತಂಪಾಗಿರಬೇಕೇನೋ! ಅವಳಿಗಿನ್ನೂ ಅರಿವಿಲ್ಲ. ಭೌತಿಕವಾಗಿ ಅವಳು ಅಲ್ಲೆಲ್ಲೋ ಇದ್ದರೂ, ಪ್ರತಿರಾತ್ರಿಯೂ ನನ್ನ ಕಲ್ಪನೆಯ ಚೌಕಟ್ಟಿನೊಳಗೆ ನನ್ನವಳಾಗಿ ಕನಸಾಗುತ್ತಾಳೆ. ಮೈ ನೆರೆಯುತ್ತಾಳೆ. ಎದೆಗೊರಗುತ್ತಾಳೆ. ನಿಟ್ಟುಸಿರುಡಿತ್ತಾಳೆ. ನಿಶೆಗಷ್ಟೆ ಸೀಮಿತವಾಗುವುದಿಲ್ಲ.! ಸಂಜೆ ಮುಗಿದರೆ ಸಾಕು. ಮುಸ್ಸಂಜೆಯ ಏಕಾಂತವನ್ನೆಲ್ಲಾ ರೌರವವಾಗಿಸಿ ಬೆಳಕಾಗುವಷ್ಟರಲ್ಲಿ ಮತ್ತೆ ಕನಸಾಗುತ್ತಾಳೆ. ಮಾಯವಾಗುತ್ತಾಳೆ.. ಬಣ್ಣಕೊಡಲೂ ಸಮಯವಿಲ್ಲದಂತೆ...!!


                                                                          - ಶಿವಪ್ರಸಾದ ಭಟ್ಟ




No comments:

Post a Comment

ಮೊದಲ ಪ್ರೀತಿ..

  ಪ್ರೀತಿಯೆಂದರೇನು .. ಅರ್ಥವಾಗದ ವಿಷಯವೊಂದಿದ್ದರೆ ಆ ವಯಸ್ಸಿನಲ್ಲಿ ಅದೊಂದೇ.. ಜೀವನ ಎಂದರೇನೆಂದೇ ಅರ್ಥವಾಗದ ಕಾಲಘಟ್ಟದಲ್ಲಿ ಪ್ರೀತಿ ಯಾರಿಗೆ ಅರ್ಥವಾದೀತು? ಹರೆಯದ ಹೊಂ...